2015-16ನೇ ಸಾಲಿಗೆ ರಾಜ್ಯ ಮುಕ್ತ ವಿವಿಗೆ ಯು.ಜಿ.ಸಿ. ಮೌನ್ಯತೆ?

ಪ್ರಸಕ್ತ 2015-16ನೇ ಸಾಲಿಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯು.ಜಿ.ಸಿ. ಮೌನ್ಯತೆ ನೀಡಲು ತೀರ್ಮಾನಿಸಿದೆ ಎಂದು ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಎಂ.ಜಿ. ಕೃಷ್ಣನ್ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಸುದ್ಧಿಗಾರರ ಜೊತೆ ಮಾತನಾಡಿದ ಎಂ.ಜಿ. ಕೃಷ್ಣನ್, ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಯು.ಜಿ.ಸಿ. ಹಠಾತ್ ರದ್ದುಪಡಿಸಿದ ಬಳಿಕ ಮಾನ್ಯತೆ ನವೀಕರಿಸುವಂತೆ ಆಗ್ರಹಿಸಿ ಹಲವು ಬಾರಿ ಪತ್ರ ವ್ಯವಹಾರ ನಡೆಸುವುದರ ಜೊತೆಗೆ, ಮುಕ್ತ ವಿಶ್ವವಿದ್ಯಾಲಯದ ನಿಯೋಗವೊಂದು ದೆಹಲಿಗೆ ತೆರಳಿ ಮಾತುಕತೆ ನಡೆಸಿತ್ತು. ಈ ಎಲ್ಲ ಪ್ರಯತ್ನಗಳು ಫಲಪ್ರದವಾಗಿವೆ. ಯು.ಜಿ.ಸಿ. ನೇಮಿಸಿದ್ದ ಮೂವರು ತಜ್ಞರ ಸಮಿತಿ ಕಳೆದ ಆಕ್ಟೋಬರ್ 28ರಂದು ಸಭೆ ನಡೆಸಿ, 2015-16ನೇ ಸಾಲಿಗೆ ಸಂಬಂಧಿಸಿದಂತೆ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನವೀಕರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ.
ಸದ್ಯದಲ್ಲೇ ಈ ಕುರಿತಾದ ಅಧಿಕೃತ ದಾಖಲೆ ಪತ್ರಗಳು ಮುಕ್ತ ವಿಶ್ವವಿದ್ಯಾಲಯಕ್ಕೆ ಲಭ್ಯವಾಗಲಿವೆ. ಆ ನಂತರ ಪ್ರವೇಶಾತಿಗೆ ಚಾಲನೆ ನೀಲಾಗುವುದು ಎಂದು ಹೇಳಿದರು. ಆದರೆ, ಕಳೆದ 2013ನೇ ಸಾಲಿನ ಕೋರ್ಸ್ ಗಳ ಮಾನ್ಯತೆ ರದ್ದಾಗಿರುವ ಸಂಬಂಧ ಯು.ಜಿ.ಸಿ. ಕೆಲ ಷರತ್ತುಗಳನ್ನು ವಿಧಿಸಿದ್ದು, ಅದಕ್ಕೆಲ್ಲ ಮುಕ್ತ ವಿಶ್ವವಿದ್ಯಾಲಯ ಬದ್ಧವಾದರೆ ಮಾತ್ರ ಮಾನ್ಯತೆ ಸಿಗಲಿದೆ ಎಂದು ಹೇಳಿದರು.
