ನಟಿ ರವೀನಾ ಟಂಡನ್ ತಾಯಿಯ ಮನೆಯಲ್ಲಿ ದುಬಾರಿ ಚಿನ್ನಾಭರಣ ಕಳ್ಳತನ: ಮಹಿಳೆಯ ಬಂಧನ

ಮುಂಬೈ: ಬಾಲಿವುಡ್ ನಟಿ ರವೀನಾ ಟಂಡನ್ ಅವರ ತಾಯಿಯ ಮನೆಯಲ್ಲಿ ನಡೆದ ಸುಮಾರು ₹25 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.
ಬಂಧಿತೆಯನ್ನು ರಾಶಿ ಚಾಬ್ರಿಯಾ ಎಂದು ಗುರುತಿಸಲಾಗಿದ್ದು, ಆಕೆ ನಟಿಯ 86 ವರ್ಷದ ತಾಯಿಯ ಆರೈಕೆಗಾಗಿ ನೇಮಕಗೊಂಡಿದ್ದಳು. ಅಡುಗೆ ಕೆಲಸ ಸೇರಿದಂತೆ ದೈನಂದಿನ ಆರೈಕೆ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ವೇಳೆ ಮನೆಯ ಲಾಕರ್ನಲ್ಲಿದ್ದ ಚಿನ್ನಾಭರಣ ಹಾಗೂ ಎರಡು ಮೊಬೈಲ್ ಫೋನ್ಗಳನ್ನು ಕಳವು ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ.

ಕಳ್ಳತನದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ರಾಶಿ ಚಾಬ್ರಿಯಾಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಳವು ಪ್ರಕರಣದಲ್ಲಿ ಆಕೆಯ ಪಾತ್ರ ಬೆಳಕಿಗೆ ಬಂದಿರುವುದಾಗಿ ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಬಂಧಿತೆಯಿಂದ ಸುಮಾರು 15 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಚಿನ್ನಾಭರಣ ಹಾಗೂ ಇತರೆ ವಸ್ತುಗಳ ಪತ್ತೆಗೆ ತನಿಖೆ ಮುಂದುವರಿದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
