ಕೃಷಿ ಮತ್ತು ಆರೋಗ್ಯ ಸಂಯೋಜನೆಗೆ ‘ಸೆಹತ್’ ಮಿಷನ್ ಆರಂಭ

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಜಂಟಿಯಾಗಿ “ಸೆಹತ್ – ಕೃಷಿ ಪರಿವರ್ತನೆಯ ಮೂಲಕ ಆರೋಗ್ಯಕ್ಕಾಗಿ ವಿಜ್ಞಾನ ಶ್ರೇಷ್ಠತೆ” ಎಂಬ ರಾಷ್ಟ್ರೀಯ ಮಿಷನ್ನ್ನು ಆರಂಭಿಸಿವೆ.
ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಯೋಜನೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಡ್ಡಾ, “ಸೆಹತ್” ಮಿಷನ್ನ್ನು ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಪ್ರತಿಕ್ರಿಯಾತ್ಮಕ ಆರೋಗ್ಯ ವ್ಯವಸ್ಥೆಯಿಂದ ತಡೆಗಟ್ಟುವಿಕೆ ಆಧಾರಿತ ಆರೋಗ್ಯ ಮಾದರಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಅಪೌಷ್ಟಿಕತೆ, ಮಧುಮೇಹ, ರಕ್ತದೊತ್ತಡ ಮತ್ತು ಕ್ಯಾನ್ಸರ್ಂತಹ ಜೀವನಶೈಲಿ ಕಾಯಿಲೆಗಳು ದೇಶಕ್ಕೆ ದೊಡ್ಡ ಸವಾಲಾಗಿವೆ ಎಂದು ಅವರು ಹೇಳಿದರು. ಪೌಷ್ಟಿಕ ಆಹಾರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಐಸಿಎಆರ್ ಪಾತ್ರವಹಿಸಲಿದ್ದು, ಅವುಗಳ ಆರೋಗ್ಯ ಪ್ರಯೋಜನಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವ ಜವಾಬ್ದಾರಿ ಐಸಿಎಂಆರ್ ವಹಿಸಿಕೊಳ್ಳಲಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಕೃಷಿ ಮತ್ತು ಆರೋಗ್ಯ ಪರಸ್ಪರ ಅವಿನಾಭಾವ ಸಂಬಂಧ ಹೊಂದಿದ್ದು, ಉತ್ತಮ ಪೌಷ್ಟಿಕಾಂಶ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಮೂಲಕ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸೆಹತ್ ಮಿಷನ್ ಮೂಲಕ ವಿಜ್ಞಾನ, ನೀತಿ ಮತ್ತು ಅನುಷ್ಠಾನದ ನಡುವಿನ ಸಮನ್ವಯವನ್ನು ಬಲಪಡಿಸಿ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ಎದುರಿಸುವ ಗುರಿ ಹೊಂದಲಾಗಿದೆ.
