ಬೆಂಗಳೂರುಗೆ ಸಮಗ್ರ ಆರ್ಥಿಕ ಮಾಸ್ಟರ್ ಪ್ಲಾನ್: ವಿಶ್ವದರ್ಜೆಯ ನಗರವಾಗಿಸಲು ಸರ್ಕಾರದ ಮಹತ್ವಾಕಾಂಕ್ಷಿ ಹೆಜ್ಜೆ

0
Bengaluru City

ಬೆಂಗಳೂರು: ನಗರವನ್ನು ವಿಶ್ವದರ್ಜೆಯ ಆರ್ಥಿಕ ಕೇಂದ್ರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆಯಡಿ, ಕರ್ನಾಟಕ ಸರ್ಕಾರವು ಇನ್ಸ್ಟಿಟ್ಯೂಟ್ ಫಾರ್ ಸಸ್ಟೈನಬಲ್ ಎಂಪ್ಲಾಯ್ಮೆಂಟ್ ಅಂಡ್ ಗ್ರೋತ್ (ISEG) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. 2032 ರಿಂದ 2037ರವರೆಗೆ ಸಮಗ್ರ ಆರ್ಥಿಕ ಮಾಸ್ಟರ್ ಪ್ಲಾನ್ ರೂಪಿಸುವುದು ಇದರ ಉದ್ದೇಶವಾಗಿದೆ.

ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್ ಹಾಗೂ ISEG ನಿರ್ದೇಶಕ ಶಿರೀಶ್ ಸಂಖೆ ಒಪ್ಪಂದದ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಶಿವಕುಮಾರ್, “ಬೆಂಗಳೂರು ನಗರ 500 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ದಶಕದ ಅಭಿವೃದ್ಧಿಗೆ ದಿಟ್ಟ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ. ನಗರಕ್ಕೆ ಹೊಸ ಚೈತನ್ಯ ನೀಡುವುದು ನಮ್ಮ ಉದ್ದೇಶ” ಎಂದು ಹೇಳಿದರು.

ಬೆಂಗಳೂರು ಮಹಾನಗರ ಪ್ರದೇಶವು 16 ಮಿಲಿಯನ್ ಜನಸಂಖ್ಯೆ ಹೊಂದಿದ್ದು, 8,000 ಚದರ ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತರಿಸಿದೆ. ದೇಶದ ಸಾಫ್ಟ್‌ವೇರ್ ರಫ್ತಿನಲ್ಲಿ ಸುಮಾರು 42 ಶೇಕಡಾ ಕೊಡುಗೆ ನೀಡುತ್ತಿರುವ ಈ ನಗರದಲ್ಲಿ ತಲಾ ಆದಾಯ ರಾಜ್ಯ ಸರಾಸರಿಗಿಂತ ದ್ವಿಗುಣವಾಗಿದೆ ಎಂದು ಅವರು ಉಲ್ಲೇಖಿಸಿದರು.

ಈ ಮಾಸ್ಟರ್ ಪ್ಲಾನ್ ಮೂಲಕ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಅಭಿವೃದ್ಧಿ, ವಸತಿ ಯೋಜನೆಗಳು ಹಾಗೂ ಸಂಚಾರ ದಟ್ಟಣೆ ಸಮಸ್ಯೆಗೆ ಸಮಗ್ರ ಪರಿಹಾರ ಕಂಡುಹಿಡಿಯಲು ಡೇಟಾ ಆಧಾರಿತ ನೀಲನಕ್ಷೆ ರೂಪಿಸಲಾಗುತ್ತದೆ. ಸುಮಾರು ₹2 ಲಕ್ಷ ಕೋಟಿ ಮೌಲ್ಯದ ಯೋಜನೆ ಹಂತ ಹಂತವಾಗಿ ಜಾರಿಯಾಗಲಿದೆ.

ISEG ಸಂಸ್ಥೆ ಈಗಾಗಲೇ ಮುಂಬೈ, ಪುಣೆ, ವಿಶಾಖಪಟ್ಟಣಂ ಮತ್ತು ವಾರಾಣಸಿ ನಗರಗಳಿಗೆ ಇಂತಹ ಯೋಜನೆಗಳನ್ನು ರೂಪಿಸಿರುವ ಅನುಭವ ಹೊಂದಿದ್ದು, ನಾಲ್ಕು ತಿಂಗಳೊಳಗೆ ಬೆಂಗಳೂರಿನ ಮಾಸ್ಟರ್ ಪ್ಲಾನ್ ಸಲ್ಲಿಸುವ ನಿರೀಕ್ಷೆಯಿದೆ.

ನಗರದ ನಾಗರಿಕರು, ಕೈಗಾರಿಕೋದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರ ಸಲಹೆಗಳನ್ನು ಪಡೆದು, ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ರೂಪಿಸುವುದಾಗಿ ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *