ಚರ್ಚ್’ನಲ್ಲಿ ಭಕ್ತನ ಮೇಲೆ ಹಲ್ಲೆ, ಸಾಮಾಜಿಕ ಬಹಿಷ್ಕಾರ; ವೀಡಿಯೊ ಸಾಕ್ಷಿ, ಇದ್ದರೂ ಪೊಲೀಸರಿಂದ ಬಿ ರಿಪೋರ್ಟ್
ಬೆಂಗಳೂರು: ರಾಜ್ಯದ ಕೆಲವು ಕ್ರಿಶ್ಚಿಯನ್ ಚರ್ಚ್’ಗಳಲ್ಲಿ ಸಾಮಾಜಿಕ ಬಹಿಷ್ಕಾರದ ಘಟನೆಗಳು ನಡೆಯುತ್ತಿದ್ದು, ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಪ್ರತಿಧ್ವನಿಸಿದೆ. ಅಂತಹಾ ಪ್ರಕರಣಗಳನ್ನು ಪೊಲೀಸರು ಮುಚ್ಚಿಹಾಕುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ. ಈ ಪೈಕಿ ಬೆಂಗಳೂರಿನ ಬಾಗಲೂರು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಕೆಯಾಗಿರುವ ಮನವಿಯೊಂದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಜೊತೆಗೆ, ಚರ್ಚುಗಳ ನಿರ್ವಹಣೆ ಸಂಬಂಧ ಸೂಕ್ತ ಕಾನೂನು ರೂಪಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಬೆಂಗಳೂರಿನ ಚಿಕ್ಕಗುಬ್ಬಿಯ ಸಂತೋಷ್ ಕುಮಾರ್ ಎಂಬವರು ಹೆಣ್ಣೂರು ರಸ್ತೆ ಬಳಿಯ ಬೆಳ್ಳಹಳ್ಳಿಯಲ್ಲಿಯಲ್ಲಿರುವ ಕ್ರಿಶ್ಚಿಯನ್ ಫಲೋಶಿಪ್ ಚರ್ಚ್ (CFC) ನಲ್ಲಿನ ಕೃತ್ಯದ ತನಿಖೆಯಲ್ಲಾಗಿರುವ ಪೊಲೀಸರ ಲೋಪದ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಡಿಜಿಪಿ ಹಾಗೂ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ‘2002ರಿಂದ ಚರ್ಚಿನ ಸದಸ್ಯರಾಗಿರುವ ತಾನು ಚರ್ಚಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ಸೇವೆ, ನಡೆ-ನುಡಿ ಗಮನಿಸಿ ಚರ್ಚಿನ ವತಿಯಿಂದ 2008ರಲ್ಲಿ ಚರ್ಚ್ ಪ್ರಮುಖರೆ ತನಗೆ ಪ್ರಶಂಸಾ ಪತ್ರ ನೀಡಿದ್ದಾರೆ. ಆದರೆ, ಆ ಚರ್ಚಿನ ಮುಖ್ಯಸ್ಥರ ಅಕ್ರಮಗಳ ಬಗ್ಗೆ ಪ್ರಶ್ನಿಸಿದಕ್ಕೆ ‘ನಡೆತೆಯೇ ಸರಿ ಇಲ್ಲ’ ಎಂದು ಆರೋಪಿಸಿ ನನ್ನನ್ನು ಚರ್ಚಿನ ಕಾರ್ಯಕ್ರಮಗಳಿಗೆ ಬಾರದಂತೆ ಧರ್ಮಗುರುಗಳು ಹಾಗೂ ಅವರ ಆಪ್ತರಿಂದ ತಡೆಯಲಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂವಿಧಾನವು ಧಾರ್ಮಿಕ ಆಚರಣೆಯ ಹಕ್ಕನ್ನು ಕಲ್ಪಿಸಿದ್ದು, ಅದರಂತೆ ಭಾನುವಾರದ ಪ್ರಾಥನೆಗೆ ತೆರಳಿದ್ದ ತನ್ನ ಮೇಲೆ 08-06-2025 ರಂದು ಪಾಸ್ಟರ್’ಗಳು ಹಲ್ಲೆ ನಡೆಸಿದ್ದಾರೆ. ಜೊತೆಗೆ ಸುಳ್ಳು ಆರೋಪಗಳನ್ನು ಹೊರಿಸಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ಸಂತೋಷ್ ಕುಮಾರ್ ಅವರು ಬಾಗಲೂರು ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು FIR ದಾಖಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಡಿಸಿಪಿಗೆ ದೂರು ವೀಡಿಯೊ ಸಾಕ್ಷಿಗಳನ್ನು ನೀಡಿದ್ದಾರೆ. ಅನಂತರ FIR (ಅಪರಾಧ ಸಂಖ್ಯೆ: 0185/2026) ದಾಖಲಿಸಲಾಗಿದೆಯಾದರೂ, ತನಿಖೆಯ ವೇಳೆ ವೀಡಿಯೊ ಸಾಕ್ಷ್ಯಗಳನ್ನು ಪರಿಗಣಿಸದೆ ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ಬದಿಗಿಟ್ಟು ಆರೋಪಿಗಳಿಗೆ ಅನುಕೂಲವಾಗುವ ರೀತಿ ಪೊಲೀಸರು ‘ಬಿ ರಿಪೋರ್ಟ್’ ಸಲ್ಲಿಸಿದ್ದಾರೆ ಎಂದು ಸಂತೋಷ್ ಕುಮಾರ್ ಅವರು ಸರ್ಕಾರದ ಗಮನಸೆಳೆದಿದ್ದಾರೆ.
ವೀಡಿಯೊ ಸಾಕ್ಷಿಯನ್ನು ಪರಿಗಣಿಸದ ಹಾಗೂ ಪ್ರತ್ಯಕ್ಷ ಸಾಕ್ಷಿಯಾಗಿರುವ ತನ್ನ ತಾಯಿಯ ಸಾಕ್ಷಿ ಹೇಳಿಕೆಯನ್ನು ಪೊಲೀಸರು ಉದ್ದೇಶಪೂರ್ವವಾಗಿಯೇ ಕೈಬಿಟ್ಟಿದ್ದಾರೆ. ದೂರುದಾರನಾದ ತನ್ನ ಜೊತೆ ಪೊಲೀಸರು ಸಂಪರ್ಕದಲ್ಲಿದ್ದರೂ ಒಮ್ಮೆಯೂ ತನ್ನ ಹೇಳಿಕೆಯನ್ನೂ ಪಡೆದಿಲ್ಲ ಎಂದು ಆರೋಪಿಸಿರುವ ಸಂತೋಷ್ ಕುಮಾರ್, ತನಿಖಾಧಿಕಾರಿಗಳು ಪಕ್ಷಪಾತ ಧೋರಣೆ ಅನುಸರಿಸಿ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಹಾಗಾಗಿ ಈ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ದೇಶದ ಸವಿಧಾನವು ಎಲ್ಲಾ ಧರ್ಮಗಳ ಆಚರಣೆಯ ರಕ್ಷಣೆಯನ್ನು ಪ್ರತಿಪಾದಿಸುತ್ತದೆ. ಆದರೆ, ಇದನ್ನೇ ವ್ಯವಸ್ಥೆಯ ಲೋಪ ಎಂಬಂತೆ ಪರಿಗಣಿಸಿ ಹಣಬಲ ಉಳ್ಳವರು, ಪ್ರಭಾವಿಗಳು ‘ಚರ್ಚು’ಗಳನ್ನು ಪ್ರಾರಂಭಿಸುತ್ತಾರೆ. ಅಥವಾ ಹಾಗೂ ಅಸ್ತಿತ್ವದಲ್ಲಿರುವ ಚರ್ಚುಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುತ್ತಾರೆ. ಅಂತಹಾ ಕ್ರಿಶ್ಚಿಯನ್ ಚರ್ಚುಗಳಲ್ಲಿನ ಅಕ್ರಮಗಳನ್ನು ಪ್ರಶ್ನಿಸಿದಲ್ಲಿ ಅಂಥವರ ಸದಸ್ಯತ್ವವನ್ನು ರದ್ದುಪಡಿಸಿ ಸಮಾಜದಿಂದ ದೂರ ಇಡಲಾಗುತ್ತದೆ.
ಚರ್ಚಿನ ಸದಸ್ಯತ್ವವೇ ರದ್ದಾದರೆ ಆತ ಧಾರ್ಮಿಕ ಸ್ವಾತಂತ್ರ್ಯದಿಂದ ವಂಚಿತನಾಗುತ್ತಾನೆ. ಇದು ‘ಸಾಮಾಜಿಕ ಭಹಿಷ್ಕಾರ’ದ ಕ್ರಮ ವಾಗಿದ್ದು, ಕಾನೂನಿನ ಲೋಪವೇ ಇದಕ್ಕೆ ಕಾರಣ ಎಂಬುದು ಪೊಲೀಸರ ತನಿಖಾ ವರದಿಯನ್ನು ಗಮನಿಸಿದಾಗ ಗೊತ್ತಾಗುತ್ತದೆ ಎಂದು ಸಂತೋಷ್ ಕುಮಾರ್ ಅವರು ಈ ಮನವಿಯಲ್ಲಿ ಸರ್ಕಾರದ ಗಮನಸೆಳೆದಿದ್ದಾರೆ.
ಚರ್ಚುಗಳ ಸ್ಥಾಪನೆ ಹೇಗಿರಬೇಕು? ಯಾವ ರೀತಿ ನೀತಿ ನಿಯಮಾವಳಿಗಳು ಇರಬೇಕು? ಚರ್ಚುಗಳ ನಿರ್ಧಾರವನ್ನು ಇತರ ಧರ್ಮಗಳ ರೀತಿ ನ್ಯಾಯಾಲಯದಲ್ಲಿ ಯಾವ ರೀತಿ ಪ್ರಶ್ನಿಸಬಹುದು? ಎಂಬ ಬಗ್ಗೆ ಈಗಿರುವ ನಿಯಮಗಳಲ್ಲಿ ಸ್ಪಷ್ಟತೆ ಇಲ್ಲ. ಇದನ್ನೇ ಕೆಲವು ಪ್ರಭಾವಿಗಳು ದುರುಪಯೋಗ ಪಡಿಸುತ್ತಿದ್ದಾರೆ. ಅನೇಕ ಚರ್ಚುಗಳಲ್ಲಿ ನಡೆದಿರುವ ಅಪರಾಧ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆದಿರುವುದಿಲ್ಲ. ಚರ್ಚುಗಳ ಪ್ರಮುಖರ ವಿರುದ್ಧ ಎಷ್ಟೇ ಗಂಭೀರ ಆರೋಪಗಳಿದ್ದರೂ ಪ್ರಭಾವ ಬಳಸಿ ‘ಬಿ’ ರಿಪೋರ್ಟ್ ಹಾಕಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಚರ್ಚುಗಳಿಗೆ ಸೂಕ್ತ ಮಾನದಂಡ ಅಗತ್ಯವಿದೆ ಎಂದು ಸಂತೋಷ್ ಕುಮಾರ್ ಸರ್ಕಾರದ ಗಮನಸೆಳೆದಿದ್ದಾರೆ.
