ವೈಕುಂಠ ಏಕಾದಶಿ ಅದ್ದೂರಿ ಆಚರಣೆ
ಬೆಂಗಳೂರು: ರಾಜಾಜಿನಗರದ ಶ್ರೀರಾಮಮಂದಿರ ಸಮೀಪದ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆಗಳು ಮತ್ತು ವೈಕುಂಠ ಮಹಾದ್ವಾರ ನಿರ್ಮಾಣದೊಂದಿಗೆ ಭಕ್ತಿಭಾವಪೂರ್ಣವಾಗಿ ಆಚರಣೆ ನಡೆಯಿತು.
ಬೆಳಿಗ್ಗೆ 6 ಗಂಟೆಯಿಂದಲೇ ದೇವಸ್ಥಾನವನ್ನು ಭಕ್ತರಿಗಾಗಿ ತೆರೆಯಲಾಗಿದ್ದು, ದಿನವಿಡೀ ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆಯುವ ನಿರೀಕ್ಷೆಯಿತ್ತು. ಭಕ್ತರಿಗೆ ಯಾವುದೇ ಅಡಚಣೆ ಉಂಟಾಗದಂತೆ ಸರತಿ ಸಾಲಿನ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.
ವೈಕುಂಠ ಏಕಾದಶಿಯ ಅಂಗವಾಗಿ ಬೆಳಗ್ಗೆಯಿಂದಲೇ ಸಂಗೀತ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತಿಭಾವ ಮತ್ತು ಸಂಸ್ಕೃತಿಯ ಸಂಗಮವಾಗಿ ದೇವಸ್ಥಾನ ಆವರಣವು ಕಂಗೊಳಿಸಿತು.
ಈ ಸಂದರ್ಭದಲ್ಲಿ ಕೈಲಾಸ ವೈಕುಂಠ ಮಹಾಕ್ಷೇತ್ರದ ಅಧ್ಯಕ್ಷ ಆರ್.ವಿ. ಹರೀಶ್, ಮಾಜಿ ಮಹಾಪೌರ ಜೆ. ಹುಚ್ಚಪ್ಪ, ಸಮಾಜಸೇವಕ ಹೆಚ್.ಎಸ್. ಸೋಮಶೇಖರ್, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್, ರಾಘವೇಂದ್ರರಾವ್ ಹಾಗೂ ಮಾಜಿ ಪಾಲಿಕೆ ಸದಸ್ಯರುಗಳು ಉಪಸ್ಥಿತರಿದ್ದರು.
ವೈಕುಂಠ ಏಕಾದಶಿ ಆಚರಣೆಯು ಭಕ್ತರಲ್ಲಿ ಆಧ್ಯಾತ್ಮಿಕ ಉಲ್ಲಾಸ ಮತ್ತು ಧಾರ್ಮಿಕ ಸಂಭ್ರಮವನ್ನು ಮೂಡಿಸಿತು.
