ಭರವಸೆಗಳ ಈಡೇರಿಕೆಗಾಗಿ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಬೃಹತ್ ಬೆಳಗಾವಿ ಚಲೋ ಯಶಸ್ವಿ

0
Asha workers Belagavi Chalo

ಬೆಳಗಾವಿ: ಭರವಸೆಗಳ ಈಡೇರಿಕೆಗಾಗಿ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಬೃಹತ್ ಬೆಳಗಾವಿ ಚಲೋ ಯಶಸ್ವಿಯಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ
ಆಶಾ ಕಾರ್ಯಕರ್ತೆಯರಿಗೆ ನೀಡಿದ ಭರವಸೆಗಳ ಈಡೇರಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ನಿಗದಿ ಮಾಡಿದ ಬೆಳವಣಿಗೆಯು ಆಶಾ ಕಾರ್ಯಕರ್ತೆಯಲ್ಲಿ ಆಶಾವಾದವನ್ನು ಹೆಚ್ಚಿಸಿದೆ.

ಎಐಯುಟಿಯುಸಿ ಸಂಯೋಜಿತ “ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ”ದ ರಾಜ್ಯ ಅಧ್ಯಕ್ಷರಾದ ಕಾ. ಕೆ.ಸೋಮಶೇಖರ್ ಯಾದಗಿರಿಯವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ,
“ಆಶಾ ಕಾರ್ಯಕರ್ತೆಯರು ಮಾಡುವ ವಿವಿಧ ಚಟುವಟಿಕೆಗಳನ್ನು ಆನ್ಲೈನ್ ಪೋರ್ಟಲ್ ಒಂದಕ್ಕೆ ಅಪ್ಲೋಡ್ ಮಾಡಿದ ನಂತರ ಪಿಎಚ್ ಸಿ ಯಿಂದ ಆರಂಭವಾಗಿ ತಾಲೂಕು ಜಿಲ್ಲೆ ಮತ್ತು ರಾಜ್ಯ ಮಟ್ಟದವರೆಗೂ ವಿವಿಧ ಹಂತಗಳಲ್ಲಿ ದೃಢೀಕರಣಗೊಂಡು ಅವರಿಗೆ ಬರುವ ಪ್ರೋತ್ಸಾಹ ಧನ ಮಾಡಿರುವ ಚಟುವಟಿಕೆಗಳಿಗಿಂತಲೂ ತುಂಬಾ ತುಂಬಾ ಕಡಿಮೆ ಬರುತ್ತಿತ್ತು. ಕೆಲಸ ಮಾಡಿದಷ್ಟು ಹಣ ಬರುತ್ತಿಲ್ಲವೆಂದು ಹಲವಾರು ವರ್ಷಗಳಿಂದ ದೂರಿದರೂ ಇಲಾಖೆ ಅದನ್ನು ಸರಿಪಡಿಸಲಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ನೀಡುವ ಪ್ರೋತ್ಸಾಹ ಧನ ಹಾಗೂ ರಾಜ್ಯ ಸರ್ಕಾರ ನೀಡುವ ಮಾಸಿಕ ನಿಶ್ಚಿತ ಗೌರವ ಧನ ಮತ್ತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಹೆಚ್ಚಳ – ಎಲ್ಲಾ ಹಣವನ್ನು ಒಟ್ಟಿಗೆ ಸೇರಿಸಿದರೆ ಅಂದಾಜು ಮಾಸಿಕ ರೂ.15,000 ಗಳಷ್ಟು ಆಗುತ್ತಿದ್ದು, ಅದನ್ನು ನಿಶ್ಚಿತ ರೂಪದಲ್ಲಿ ನೀಡಬೇಕೆಂದು ಕೇಳುತ್ತಿದ್ದೇವೆ. ಹಲವಾರು ವರ್ಷಗಳಿಂದ ಪದೇ ಪದೇ ಮನವಿ ಪತ್ರಗಳನ್ನು ಸಲ್ಲಿಸಿ, ಹಲವು ಬಾರಿ ರಾಜ್ಯ ಮಟ್ಟದ ಹೋರಾಟಗಳನ್ನು ಸಂಘಟಿಸಲಾಗಿದೆ. ಇದೇ ವರ್ಷದ ಜನವರಿಯಲ್ಲಿ ಮಾಸಿಕ ಗ್ಯಾರಂಟಿ 10,000 ಘೋಷಣೆ ಮಾಡಿ ಆಶಾ ಕಾರ್ಯಕರ್ತೆಯರ ಕೈಹಿಡಿದ ಸರ್ಕಾರ ಎಂದು ಪ್ರಚಾರ ಮಾಡಿ ಮಾತು ತಪ್ಪಿದ್ದಾರೆ. ನುಡಿದಂತೆ ನಡೆವವರು, ಹೆಣ್ಣು ಮಕ್ಕಳ ಪರ ಎನ್ನುವ ರಾಜ್ಯ ಸರ್ಕಾರ ಈಗಲಾದರೂ ಕಣ್ತೆರೆದು ನೋಡಬೇಕು” ಎಂದರು.

ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು ಮಾತನಾಡುತ್ತಾ, “ರಾಜ್ಯ ಸರ್ಕಾರ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಕಳೆದ ಜನವರಿ 7ನೇ ತಾರೀಕು ನಾಲ್ಕು ದಿನಗಳ ಅಹೋರಾತ್ರಿ ಪ್ರತಿಭಟನೆಯ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸರ್ಕಾರ 10,000 ಖಚಿತ ಎನ್ನುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟವನ್ನು ಹಿಂತೆಗೆದುಕೊಂಡೆವು. ಪದೇ ಪದೇ ಸರ್ಕಾರ ಆಶಾ ಕಾರ್ಯಕರ್ತೆಯರನ್ನು ಬೀದಿಗೆ ಬರುವಂತೆ ಮಾಡುವ ಬದಲು ಈ ಬಾರಿಯಾದರೂ ಕೊಟ್ಟ ಮಾತು ಉಳಿಸಿಕೊಳ್ಳಲಿ” ಎಂದರು.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವಾದ ಬುಧವಾರ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟವನ್ನು ಹತ್ತಿಕ್ಕಲು ಅನೇಕ ಮಂದಿ ಹೋರಾಟಗಾರರನ್ನು ಬಂಧಿಸಿರುವ ಸರ್ಕಾರದ ನಡೆಯನ್ನು ಖಂಡಿಸಿ ಗೊತ್ತುವಳಿ ಮಂಡಿಸಲಾಯಿತು.

ಈ ನಡುವೆ ಮುಖ್ಯಮಂತ್ರಿಗಳ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಆರೋಗ್ಯ ಸಚಿವರು ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡುತ್ತಾ, ಮಾಸಿಕ ಗ್ಯಾರಂಟಿ 10,000 ಜಾರಿಗೊಳಿಸುವ ಕುರಿತು ಹಾಗೂ ಇನ್ನಿತರ ಮುಖ್ಯ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಂಘದ ಮುಖಂಡರೊಂದಿಗೆ ಗುರುವಾರ ಮಧ್ಯಾಹ್ನವೇ ಬೆಳಗಾವಿ ಅಧಿವೇಶನದ ನಡುವೆ ಸಮಯ ನಿಗದಿಯಾಗಿದ್ದು, ಚರ್ಚೆಯ ನಂತರ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೂ ಸಹ ತರಲಾಗುವುದು ಎಂದರು. ಎನ್.ಎಚ್.ಎಂ. ನ ಮಿಷನ್ ಡೈರೆಕ್ಟರ್ ಅವಿನಾಶ್ ಮೆನನ್ ಅವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯ ಉಪಾಧ್ಯಕ್ಷರುಗಳಾದ ರಮಾ ಟಿ.ಸಿ, ವಿ.ಜಿ.ದೇಸಾಯಿ, ಗಂಗಾಧರ ಬಡಿಗೇರ, ಶಾಂತಾ, ಹನುಮೇಶ್.ಜಿ, ಖಜಾಂಚಿಗಳಾದ ಸಂಧ್ಯಾ ಹಾಗೂ ಕುಕ್ಕವಡ್ ಮಂಜುನಾಥ್,ತಿಪ್ಪೇಸ್ವಾಮಿ,ಭುವನಾ,ಸುಜಾತ ಕಾಡಮಟ್, ಗೀತಾ ರಾಯಾಗೊಳ್ ಪ್ರತಿಯೊಂದು ಜಿಲ್ಲಾ ಆಶಾ ನಾಯಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳಿಂದ ಸಾವಿರಾರು ಆಶಾ ಕಾರ್ಯಕರ್ತೆಯರು ಆಗಮಿಸಿದ್ದರು.

Leave a Reply

Your email address will not be published. Required fields are marked *

You may have missed