JJM ಯೋಜನೆ: ರಾಜ್ಯಕ್ಕೆ ಕೇಂದ್ರದಿಂದ 13,004,63 ಕೋಟಿ ರೂ ಬಾಕಿ; ಖರ್ಗೆ

0
Priyank Kharge

ಬೆಂಗಳೂರು: ರಾಜ್ಯ ಸರ್ಕಾರಗಳ ಸಾಧನೆಯ ನೆರಳಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಹೊಸ ವಿಷಯವೇನೂ ಅಲ್ಲ ಎಂದಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಜಲಜೀವನ್ ಮಿಷನ್ ಹೆಸರಿಗೆ ಮಾತ್ರ ಕೇಂದ್ರ ಪುರಸ್ಕೃತ ಯೋಜನೆಯಾದರೂ ವಾಸ್ತವದಲ್ಲಿ ಕರ್ನಾಟಕದ ಮಟ್ಟಿಗೆ ಕೇಂದ್ರ ತೀರಸ್ಕೃತ ಯೋಜನೆಯಾಗಿದೆ ಎನ್ನಬಹುದು ಎಂದಿದ್ದಾರೆ.

ರಾಜ್ಯದಲ್ಲಿ ಪ್ರಸಕ್ತ ಸಾಲಿನವರೆಗೆ JJM ಯೋಜನೆಗಾಗಿ ಒಟ್ಟು ₹35,698,58 ಕೋಟಿ ಖರ್ಚು ಮಾಡಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರ ಖರ್ಚು ಮಾಡಿರುವುದು ₹24,598,45 ಕೋಟಿ. ಇದುವರೆಗೂ ಕೇಂದ್ರ ಸರ್ಕಾರ ಕೊಟ್ಟಿರುವುದು ₹11, 786, 63 ಕೋಟಿ ಮಾತ್ರ. ಪ್ರಸಕ್ತ ಸಾಲಿನವರೆಗೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಬೇಕಾದ ಮೊತ್ತ ₹13,004,63 ಕೋಟಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ.

ಬಿಜೆಪಿಯ ಕೇಂದ್ರ ಸರ್ಕಾರದ ಕರ್ನಾಟಕದೆಡೆಗಿನ ಮಲತಾಯಿ ಧೋರಣೆ ಹೇಗಿದೆ ಎಂದು ನೋಡುವುದಾದರೆ 2024-25ನೇ ಆರ್ಥಿಕ ಸಾಲಿನಲ್ಲಿ JJM ಯೋಜನೆಗಾಗಿ ₹3,804,41 ಕೋಟಿಯನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿತ್ತು ಆದರೆ ಬಿಡುಗಡೆಯಾದ ಮೊತ್ತ ಕೇವಲ ₹570,66 ಕೋಟಿ ಮಾತ್ರ. ಯೋಜನೆಯ ಜಾರಿಗಾಗಿ ರಾಜ್ಯ ಸರ್ಕಾರವೇ ಆಸಕ್ತಿವಹಿಸಿ ಹಣ ಖರ್ಚು ಮಾಡಿದೆ, ಆದರೆ ಕೇಂದ್ರ ಸರ್ಕಾರದ ಅನ್ಯಾಯ ಮಾತ್ರ ಮುಂದುವರೆದೇ ಇದೆ.

ಈ ಹಿಂದೆಯೂ JJM ಯೋಜನೆಯ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದರು, ಈಗಲೂ ಮತ್ತೊಮ್ಮೆ ಒತ್ತಾಸಿದ್ದಾರೆ. ಕೇಂದ್ರ ಸರ್ಕಾರದ ಇಂತಹ ಅನ್ಯಾಯಗಳಿಂದ, ನಿರ್ಲಕ್ಷ್ಯದಿಂದ, ಕರ್ನಾಟಕದೆಡೆಗಿನ ದ್ವೇಷದಿಂದ ರಾಜ್ಯದ ಆರ್ಥಿಕ ಪ್ರಗತಿಗೆ ಪೆಟ್ಟು ಬೀಳುತ್ತಿದ್ದರೂ ರಾಜ್ಯದ ಯಾವೊಬ್ಬ ಬಿಜೆಪಿ ನಾಯಕರು ಕರ್ನಾಟಕದ ಪರವಾಗಿ ಧ್ವನಿ ಎತ್ತುವ, ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡದಿರುವುದು ಬಿಜೆಪಿಯ ರಾಜಕೀಯ ಮತ್ತು ನೈತಿಕ ದಿವಾಳಿತನಕ್ಕೆ ಸಾಕ್ಷಿ. ಬಿಜೆಪಿ ಪಕ್ಷದವರಿಗೆ ನಿಜಕ್ಕೂ ರಾಜ್ಯದ ಪರವಾಗಿ ಕಾಳಜಿ ಇದ್ದರೆ ಸರ್ಕಾರದ ಒತ್ತಾಯಕ್ಕೆ ದನಿಗೂಡಿಸಿ ತಮ್ಮ ಬದ್ಧತೆಯನ್ನು ನಿರೂಪಿಸಲಿ ಎಂದು ಸಚಿವ ಖರ್ಗೆ ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed