‘ಧ್ವನಿ ಸ್ಪಂದನ’: KSRTCಗೆ ‘ಅರ್ಬನ್‌ ಟ್ರಾನ್ಸ್‌ಪೋರ್ಟ್‌ ಎಕ್ಸಲೆನ್ಸ್‌’ ಪ್ರಶಸ್ತಿ

0
KSRTC Dhwani Spandana project- National Award

ಗುರುಗ್ರಾಮ್‌ (ಹರಿಯಾಣ): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತೊಂದು ರಾಷ್ಟ್ರ ಮಟ್ಟದ ಸಾಧನೆ ದಾಖಲಿಸಿದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದಿಂದ 2025ರ “Award of Excellence in Urban Transport” ಪುರಸ್ಕಾರವನ್ನು ಕೆಎಸ್‌ಆರ್‌ಟಿಸಿ ಪಡೆದಿದೆ.

‘ಹಿಂದಿನ ವರ್ಷ ಅತ್ಯುತ್ತಮ ನಗರ ಸಾರಿಗೆ ಯೋಜನೆಗಳನ್ನು ಜಾರಿಗೊಳಿಸಿದ ರಾಜ್ಯ’ ಎಂಬ ವರ್ಗದಲ್ಲಿ ನಿಗಮದ ಮೈಸೂರು ನಗರ ಸಾರಿಗೆಯ ‘ಧ್ವನಿ ಸ್ಪಂದನ’ ಉಪಕ್ರಮವು ಈ ಗೌರವಕ್ಕೆ ಪಾತ್ರವಾಗಿದೆ.

ಮೈಸೂರು ನಗರ ಸಾರಿಗೆಯ 200ಕ್ಕೂ ಹೆಚ್ಚು ಬಸ್ಸುಗಳಲ್ಲಿ ಜಾರಿಗೆ ತಂದಿರುವ ‘ಧ್ವನಿ ಸ್ಪಂದನ – ಆನ್‌ಬೋರ್ಡ್‌ ಬಸ್‌ ಐಡೆಂಟಿಫಿಕೇಶನ್‌ ಮತ್ತು ನ್ಯಾವಿಗೇಶನ್‌ ಸಿಸ್ಟಮ್’ ದೇಶದ ಮೊದಲ ಪ್ರಯೋಗಾತ್ಮಕ ಯೋಜನೆ ಎಂಬ ವಿಶೇಷತೆ ಹೊಂದಿದೆ. ದೃಷ್ಟಿ ವಿಕಲ ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಿ, ಅವರ ಆತ್ಮವಿಶ್ವಾಸ, ಭದ್ರತೆ ಹಾಗೂ ಸಂಚಾರ ಸ್ವಾತಂತ್ರ್ಯವನ್ನು ಹೆಚ್ಚಿಸಲು ಇದು ಮಹತ್ತರ ಪಾತ್ರ ವಹಿಸಿದೆ.

ಈ ಪ್ರಶಸ್ತಿಯನ್ನು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್‌ ಲಾಲ್‌ ಹಾಗೂ ರಾಜ್ಯ ಸಚಿವ ತೋಕನ್‌ ಸಾಹು ಅವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಅವರಿಗೆ ಪ್ರದಾನ ಮಾಡಿದರು.

‘ಧ್ವನಿ ಸ್ಪಂದನ’ ಎಂದರೇನು?

ಐಐಟಿ ದೆಹಲಿಯ ರೈಸ್ಡ್‌ ಲೈನ್ಸ್‌ ಫೌಂಡೇಶನ್‌ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ಜರ್ಮನಿಯ GEZ ಸಂಸ್ಥೆಯ ಸಹಯೋಗದಿಂದ ರೂಪುಗೊಂಡಿದೆ. ಇದು ದೃಷ್ಟಿ ವಿಕಲ ಪ್ರಯಾಣಿಕರಿಗೆ ಬಸ್‌ಗಳ ಗುರುತನ್ನು ಧ್ವನಿ ಆಧಾರಿತ ಸೂಚನೆಗಳ ಮೂಲಕ ನೀಡುತ್ತದೆ ಮತ್ತು ಬಸ್‌ ಪ್ರವೇಶದ ಸ್ಥಳವನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಮೈಸೂರು ನಗರದಲ್ಲಿ 400ಕ್ಕೂ ಹೆಚ್ಚು ದೃಷ್ಟಿ ವಿಕಲ ಬಳಕೆದಾರರಿಗೆ ಈ ವ್ಯವಸ್ಥೆಯ ಕುರಿತು ತರಬೇತಿ ನೀಡಲಾಗಿದೆ. ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಜಾರಿಗೆ ತರಲಾದ ಈ ಯೋಜನೆ ದೇಶದಾದ್ಯಂತ ಮಾದರಿಯಾಗಿದೆ ಎಂದು ಶ್ಲಾಘನೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *

You may have missed