ಶಿವಮೊಗ್ಗದಲ್ಲಿ ನ.7ರಿಂದ ನಾಲ್ಕು ದಿನಗಳ ಕೃಷಿ ಮೇಳ; ನವೀನ ತಂತ್ರಜ್ಞಾನ, ಸಿರಿಧಾನ್ಯಗಳ ಆಕರ್ಷಣೆ

0
agriculture-farmers-raitha1

ಶಿವಮೊಗ್ಗ: ‘ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿಯತ್ತ’ ಎಂಬ ಘೋಷವಾಕ್ಯದಡಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ನವೆಂಬರ್ 7ರಿಂದ 10ರ ವರೆಗೆ ನವುಲೆ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳವನ್ನು ಆಯೋಜಿಸಿದೆ.

ರಾಜ್ಯದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಈ ಮೇಳದಲ್ಲಿ ನೂರಾರು ಕೃಷಿ ಪ್ರಾತ್ಯಕ್ಷಿಕೆಗಳು, ನವೀನ ತಂತ್ರಜ್ಞಾನ ಪ್ರದರ್ಶನಗಳು ಮತ್ತು ಕೃಷಿ ಸಾಧನೆಗಳ ಅನಾವರಣ ನಡೆಯಲಿದೆ.

ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ. ಜಗದೀಶ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣಗಳು ಮತ್ತು ಪರಿಕರಗಳ ಪ್ರದರ್ಶನ, ರೈತ–ವಿಜ್ಞಾನಿ ಸಂವಾದಗಳು ಹಾಗೂ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿ ಮೇಳದಲ್ಲಿ ತಂತ್ರಜ್ಞಾನ ಉದ್ಯಾನವನ ವಿಶೇಷ ಆಕರ್ಷಣೆಯಾಗಿದ್ದು, ನವೀನ ಕೃಷಿ ತಂತ್ರಜ್ಞಾನಗಳನ್ನು ರೈತರಿಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಪ್ರದರ್ಶಿಸಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ವಿವಿಧ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೃಷಿ ಪರಿಕರಗಳು, ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಹೊಸ ಯಂತ್ರೋಪಕರಣಗಳ ಪ್ರದರ್ಶನವೂ ಇರಲಿದೆ.

ಮೇಳದಲ್ಲಿ ಸಮಗ್ರ ಕೃಷಿ ಪದ್ಧತಿ, ಸಂರಕ್ಷಿತ ಕೃಷಿ, ಪುಷ್ಪಕೃಷಿ, ತಾರಸಿ ತೋಟ, ಜೇನು ಸಾಕಾಣಿಕೆ ಮತ್ತು ಕೀಟ ಪ್ರಪಂಚ, ಸಿರಿಧಾನ್ಯಗಳ ಮಹತ್ವ, ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಪಶುಸಂಗೋಪನೆ, ಮೀನುಗಾರಿಕೆ ತಂತ್ರಜ್ಞಾನ, ಅಣಬೆ ಬೇಸಾಯ, ಸಾವಯವ ಕೃಷಿ ಹಾಗೂ ಹವಾಮಾನ ಆಧಾರಿತ ಕೃಷಿ ತಂತ್ರಗಳು ಪ್ರದರ್ಶನಕ್ಕಿಡಲಾಗಿವೆ. ಮೇಳದ ಕೊನೆಯ ದಿನ ಪ್ರಗತಿಪರ ರೈತರು ಮತ್ತು ರೈತ ಮಹಿಳೆಯರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಲಾಗುತ್ತದೆ.

ವಿಶ್ವವಿದ್ಯಾನಿಲಯವು ಕಳೆದ ವರ್ಷಗಳಲ್ಲಿ 25 ಕ್ಕೂ ಹೆಚ್ಚು ಹೊಸ ತಳಿಗಳು, 42 ಉತ್ಪಾದನಾ ತಂತ್ರಜ್ಞಾನಗಳು, 31 ಸಸ್ಯರಕ್ಷಣಾ ವಿಧಾನಗಳು ಹಾಗೂ ಕೃಷಿ ಯಾಂತ್ರೀಕರಣ ಕ್ಷೇತ್ರದಲ್ಲಿ ಅನೇಕ ನವೀನತೆಗಳನ್ನು ಅಭಿವೃದ್ಧಿಪಡಿಸಿದೆ ಎಂದು ಡಾ. ಜಗದೀಶ್ ತಿಳಿಸಿದರು.

ಈ ವರ್ಷ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ‘ಸಹ್ಯಾದ್ರಿ ಸಿಂಧೂರ’ ಎಂಬ ಸಣ್ಣ ಕೆಂಪಕ್ಕಿ ಭತ್ತದ ತಳಿ ಬಿಡುಗಡೆಗೊಂಡಿದೆ. ಜೊತೆಗೆ ಕೆಎಚ್‌ಪಿ–11 ಭತ್ತದ ತಳಿ, ಕೆಎಂಆರ್–630 ರಾಗಿ, ಬರಗು ತಳಿ ಹಾಗೂ ಸಹ್ಯಾದ್ರಿ ಪ್ರಗತಿ ಕಡಲೆ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈವರೆಗೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ರೈತರಿಗೆ ತಾಂತ್ರಿಕ ಮಾರ್ಗದರ್ಶನ ನೀಡಲಾಗಿದೆ. ಕೃಷಿ–ತೋಟಗಾರಿಕೆ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಜಿಲ್ಲಾ ಮಟ್ಟದ ಶ್ರೇಷ್ಠ ರೈತರು ಹಾಗೂ ರೈತ ಮಹಿಳೆಯರನ್ನು ಈ ಮೇಳದಲ್ಲಿ ಗೌರವಿಸಲಾಗುತ್ತಿದೆ ಎಂದವರು ತಿಳಿಸಿದರು.

Leave a Reply

Your email address will not be published. Required fields are marked *

You may have missed