‘ಗ್ರೇಟರ್ ಮೈಸೂರು’ ಯೋಜನೆ ಪರಿಪೂರ್ಣ ಅನುಷ್ಠಾನಕ್ಕೆ ಸಿಎಂ ಸೂಚನೆ

0
Mysore City - Circle

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಗ್ರೇಟರ್ ಮೈಸೂರು ಆಗಬೇಕು. ಆದರೆ ನಗರದ ಈಗಿನ ಘನತೆ, ಸಂಸ್ಕೃತಿ, ವಿಶಾಲತೆಗೆ ಧಕ್ಕೆ ಆಗಬಾರದು‌ ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಗ್ರೇಟರ್ ಮೈಸೂರು ಕುರಿತ ಪ್ರಥಮ ಸಭೆಯಲ್ಲಿ ಬೆಂಗಳೂರಿನ‌ ರೀತಿ ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು, ಎಸ್‌ಟಿಪಿ ಯಾವುದರ ಸಮಸ್ಯೆಯೂ ಇರದಂತೆ ಜಿಲ್ಲಾಡಳಿತವು ಸ್ಪಷ್ಟವಾದ, ವೈಜ್ಞಾನಿಕವಾದ ಬ್ಲೂ ಪ್ರಿಂಟ್ ಸಿದ್ಧಪಡಿಸಿ, ಅನುಷ್ಠಾನ ಮಾಡಬೇಕು ಎಂದರು.

ಗ್ರೇಟರ್ ಮೈಸೂರು ಸುಸಜ್ಜಿತವಾಗಿರಬೇಕು ಮತ್ತು ವ್ಯವಸ್ಥಿತವಾಗಿರಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಾಗ ಈಗಿನ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸದೆ, ಮುಂದಿನ 15-20 ವರ್ಷಗಳ ಮುಂದಾಲೋಚನೆಯಿಂದ ವೈಜ್ಞಾನಿಕ ಯೋಜನೆ ರೂಪಿಸಬೇಕಿದೆ ಎಂದ ಸಿಎಂ, ಟ್ರಾಫಿಕ್ ಸಮಸ್ಯೆ ಯಾವುದೇ ಕಾರಣಕ್ಕೂ ಇರಬಾರದು.
ಉದ್ಯೋಗ ಸೃಷ್ಟಿಯಿಂದ ಘನ ತ್ಯಾಜ್ಯ ನಿರ್ವಹಣೆವರೆಗೂ ಆಧುನಿಕ‌ ತಂತ್ರಜ್ಞಾನ ಬಳಕೆ ಮಾಡುವ ಬಗ್ಗೆ ಯೋಜನೆ ಸಿದ್ಧಪಡಿಸಿ, ಅನುಷ್ಠಾನ ಮಾಡಬೇಕು ಎಂದರು.

ತ್ಯಾಜ್ಯ ವಿಲೇವಾರಿ, ಕೈಗಾರಿಕಾ ತ್ಯಾಜ್ಯ ವಿಲೇವಾರಿ ಎಲ್ಲವೂ ವೈಜ್ಞಾನಿಕವಾಗಿರಬೇಕು. ಬಡಾವಣೆಗಳ ನಿರ್ಮಾಣ ಆಗುವಾಗ ಚರಂಡಿ, ರಸ್ಯೆಗಳು, ಒಳಚರಂಡಿ, ನೀರು, ವಿದ್ಯುತ್ ಸಂಪರ್ಕದ ಜೊತೆಗೆ ಪಾರ್ಕ್ ಗಳು ಕೂಡ ವ್ಯವಸ್ಥಿತವಾಗಿರಬೇಕು. ಮೈಸೂರಿಗೆ ಮತ್ತೊಂದು ಹೊರ ವರ್ತುಲ ರಸ್ತೆ ಅಗತ್ಯ ಬೀಳುತ್ತದೆ. ಇದಕ್ಕೆ ಈಗಲೇ ಯೋಜನೆ ಸಿದ್ಧ ಮಾಡಬೇಕು. ಆದಾಯವೂ ಹೆಚ್ಚಾಗಬೇಕು. ಇದಕ್ಕೆ ಸ್ಪಷ್ಟ ಅಂದಾಜು, ಯೋಜನೆ ರೂಪಿಸಿಕೊಳ್ಳಬೇಕು ಎಂದರು.

ವಿಶಾಲವಾದ ರಸ್ತೆಗಳು ಮೈಸೂರಿನ ಹೆಗ್ಗಳಿಕೆ, ಗ್ರೇಟರ್ ಮೈಸೂರು ಇನ್ನಷ್ಟು ಯೋಜನಾ ಬದ್ಧವಾಗಿರಬೇಕು. ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಾಗಬೇಕಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವು ಒಂದು ಸಮಗ್ರವಾದ ಪ್ರಗತಿ ಯೋಜನೆ ಸಿದ್ಧಪಡಿಸಬೇಕಿದೆ ಎಂದು ಸಿಎಂ ತಿಳಿಸಿದರು.

Leave a Reply

Your email address will not be published. Required fields are marked *

You may have missed