‘RSS ಬಗ್ಗೆ ಟೀಕಿಸುವ ಮೊದಲು ನಿಮ್ಮನ್ನು ನೀವು ಆತ್ಮ ವಿಮರ್ಶೆ ಮಾಡಿಕೊಳ್ಳಿ’

0
BY Vijayendra

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಟೀಕಿಸುವ ಮೊದಲು ನಿಮ್ಮನ್ನು ನೀವು ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ಅಖಂಡ ಭಾರತ ನಿರ್ಮಾಣದ ಸಂಕಲ್ಪತೊಟ್ಟು ಜಾತಿರಹಿತ ಧರ್ಮ ಕಟ್ಟುವ ಮೌಲ್ಯ ಅಳವಡಿಸಿಕೊಂಡು, ರಾಷ್ಟ್ರೀಯತೆಯ ಸಿದ್ದಾಂತದೊಂದಿಗೆ ಲಕ್ಷಾಂತರ ತಪಸ್ವಿ ಹಾಗೂ ಸಮರ್ಪಣಾ ಕಾರ್ಯಕರ್ತರುಗಳ ಪರಿಶ್ರಮದಿಂದ ಬೃಹತ್ ವೃಕ್ಷದಂತೆ ಬೆಳೆದು ನಿಂತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಟೀಕಿಸುವ ಮೊದಲು ನಿಮ್ಮನ್ನು ನೀವು ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂದವರು ಹೇಳಿದ್ದಾರೆ.

ಸಮಾಜವಾದಿ ಮುಖವಾಡ ಧರಿಸಿ, ಜಾತ್ಯಾತೀತತೆಯ ಸೋಗಿನಲ್ಲಿ ಮುಸ್ಲಿಂ ಸಮುದಾಯದ ಓಲೈಕೆಯ ರಾಜಕಾರಣ ಮಾಡುತ್ತಿರುವ ನಿಮಗೆ ಸಂವಿಧಾನದ ಆಶಯ ಹಾಗೂ ಮೌಲ್ಯಗಳನ್ನು ಕುರಿತು ಮಾತನಾಡುವ ಯಾವ ನೈತಿಕ ಹಕ್ಕೂ ಇಲ್ಲ ಎಂದಿರುವ ಅವರು, ‘ಜಯಪ್ರಕಾಶ್ ನಾರಾಯಣರ ಚಳುವಳಿಯಿಂದ ಪ್ರೇರಿತರಾಗಿ ಸಮಾಜವಾದಿ ರಾಜಕಾರಣ ಆರಂಭಿಸಿದೆ’ ಎಂದು ಹೇಳಿಕೊಳ್ಳುವ ನೀವು ಭಾರತದ ಪ್ರಜಾಪ್ರಭುತ್ವದ ಕತ್ತು ಹಿಸುಕಿದ ಇಂದಿರಾ ಕಾಂಗ್ರೆಸ್ ಅನ್ನು ವಾಚಾಮಗೋಚರವಾಗಿ ಟೀಕಿಸುತ್ತಿದ್ದಿದ್ದು ನೀವು ಮರೆತಂತಿದೆ ಎಂದಿದ್ದಾರೆ.

ಸಂವಿಧಾನವನ್ನು ಹತ್ಯೆ ಮಾಡಿ ಪ್ರಜಾಪ್ರಭುತ್ವವನ್ನು ಮೆಟ್ಟಿ ನಿಂತ ಸರ್ವಾಧಿಕಾರಿ ಆಡಳಿತ ನಡೆಸಿದ ಕಾಂಗ್ರೆಸ್ ತಾನು ಮಾಡಿದ ಪ್ರಜಾಪ್ರಭುತ್ವದ ಕಗ್ಗೊಲೆಯ ಕುರಿತು ಈವರೆವಿಗೂ ಕ್ಷಮೆ ಯಾಚಿಸಿಲ್ಲ, ಕನಿಷ್ಠ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿಲ್ಲ, ಅಂತಹ ಸವಿಂಧಾನ ವಿರೋಧಿ ಕಾಂಗ್ರೆಸ್ ಪಕ್ಷದ ನೆರಳು ಆಶ್ರಯಿಸಿ ಅಧಿಕಾರ ಅನುಭವಿಸುವ ಹಪಾಹಪಿತನದಿಂದ ನೈತಿಕತೆಯನ್ನೆಲ್ಲ ಮೂಲೆಗೊತ್ತಿ, ಅಧಿಕಾರಕ್ಕೆ ಅಂಟಿ ಕುಳಿತಿರುವ ನೀವು ಯಾವ ಮುಖ ಹೊತ್ತು ಆರ್.ಎಸ್.ಎಸ್ ಅನ್ನು ಟೀಕಿಸುತ್ತಿದ್ದೀರಿ? ಎಂದವರು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಮಾಜವಾದ ಹಾಗೂ ಜಾತ್ಯಾತೀತ ಪದಗಳನ್ನು ಸಂವಿಧಾನಕ್ಕೆ ಸೇರ್ಪಡಿಸಿ ಅದರ ಹೆಸರಿನಲ್ಲಿ ತುರ್ತು ಪರಿಸ್ಥಿತಿಯ ಕಾಲದಲ್ಲಿ ಸರ್ವಾಧಿಕಾರ ಮೆರೆಯಲಾಯಿತು. ನ್ಯಾಯಾಂಗ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಪ್ರಜಾಪ್ರಭುತ್ವವಾದಿ ರಾಜಕೀಯ ನೇತಾರರನ್ನು ಜೈಲಿಗೆ ಹಾಕಲಾಯಿತು, ಎಂಬ ಹೇಳಿಕೆಯನ್ನು ನೀಡಿದ್ದಾರೆ. ತಾನು ಮಾಡಿದ ಮಹಾ ಪ್ರಮಾದಕ್ಕೆ ಕಾಂಗ್ರೆಸ್ ಈವರೆವಿಗೂ ದೇಶದ ಜನತೆಯ ಕ್ಷಮೆ ಕೋರಿಲ್ಲ ಎಂಬ ವಾಸ್ತವ ಸಂಗತಿಯ ಮೇಲೆ ಕನ್ನಡಿ ಹಿಡಿದಿದ್ದಾರೆ. ಈ ಹೇಳಿಕೆಯನ್ನು ಅರಗಿಸಿಕೊಳ್ಳಲಾಗದ ನೀವು
ನೆಹರೂ ಕುಟುಂಬವನ್ನು ಒಲೈಸಲು ‘ಸಂವಿಧಾನದ ಆಶಯವನ್ನು ಅತ್ಯಂತ ಗೌರವದಿಂದ ಎತ್ತಿ ಹಿಡಿದು ಕಟಿಬದ್ಧ ಕಾರ್ಯಕ್ರಮಗಳನ್ನು ರೂಪಿಸಿ ಭಾರತೀಯತೆಯ ರಕ್ಷಣೆಗಾಗಿ ಹೋರಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೀತಿ, ಧೋರಣೆಗಳನ್ನು ಅರ್ಥ ಮಾಡಿಕೊಳ್ಳುವ ವಿವೇಕ ಪ್ರದರ್ಶಿಸದೇ ವ್ಯತಿರಿಕ್ತ ವ್ಯಾಖ್ಯಾನ ಮಾಡಲು ಹೊರಟಿದ್ದೀರಿ ಎಂದಿದ್ದಾರೆ.

ಜಾತ್ಯಾತೀತವಾದ, ಸಮಾಜವಾದ ಎಂಬ ಪದಗಳು ನಿಮ್ಮ ಹಾಗೂ ಕಾಂಗ್ರೆಸ್ ನ ಭ್ರಷ್ಟ, ಸ್ವಜನ ಪಕ್ಷಪಾತ ಹಾಗೂ ಮತಬ್ಯಾಂಕ್ ರಾಜಕಾರಣಕ್ಕೆ ಬಳಕೆಯಾಗುತ್ತಿರುವುದು ಈ ನಾಡಿನ ಹಾಗೂ ದೇಶದ ದೌರ್ಭಾಗ್ಯವಾಗಿದೆ.
ಜಾತ್ಯಾತೀತವಾದ, ಸಮಾಜವಾದ ಎಂಬುದು ಇಂದು ಡೋಂಗೀವಾದ ಎಂಬುದು ಜನರಿಗೆ ಸ್ಪಷ್ಟವಾಗಿ ಮನವರಿಕೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

Leave a Reply

Your email address will not be published. Required fields are marked *