ಗೃಹಮಂತ್ರಿ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ನೀಡಬೇಕು; ಸಿ.ಟಿ. ರವಿ

0
ct-ravi-pc-300x167

ಬೆಂಗಳೂರು: “ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ, ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ. ಇವೆರಡೂ ಒಂದು ನಾಣ್ಯದ ಎರಡು ಮುಖಗಳು” ಎಂಬ ಗಂಭೀರ ಆರೋಪವನ್ನು ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ; ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿದೆ. ಕಾಂಗ್ರೆಸ್ ಶಾಸಕರೇ ತಮ್ಮ ಸರ್ಕಾರದ ವಿರುದ್ಧ ಅಳಲು ತೋಡಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು.

ಸಿ.ಟಿ. ರವಿ ಅವರು, ಉದ್ಯಮಿಗಳು ಹಾಗೂ ಸಾಮಾನ್ಯ ನಾಗರಿಕರು ಎದುರಿಸುತ್ತಿರುವ ಲಂಚದ ಅನುಭವದ ವಿವರಗಳನ್ನೂ ಉದಾಹರಿಸಿದರು. “ಬಿಲ್ಡಿಂಗ್ ಪ್ಲಾನ್ ಮಂಜೂರಿಗೆ ಪ್ರತಿ ಅಡಿಗೆ 100 ರೂ. ಲಂಚ ನೀಡಬೇಕಾಗುತ್ತಿದೆ. ಭೂ ಬದಲಾವಣೆಗೆ ಎಕರೆಗೂ 25 ಲಕ್ಷ ರೂ. ಲಂಚ ಕೇಳಲಾಗುತ್ತಿದೆ. ಎಲ್ಲ ಇಲಾಖೆಗಳಲ್ಲಿ ಲಂಚದ ಬೇಡಿಕೆ ನಡೆಯುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅನುದಾನ ಪಡೆಯಲು ಅಡ್ವಾನ್ಸ್ ಲಂಚ, ನಂತರ ಬಿಲ್Clearing, ಎನ್‌ಒಸಿ, ಹಾಗೂ ಕಾಮಗಾರಿಗೆ ಪ್ರತ್ಯೇಕವಾಗಿ ಲಂಚ ಬೇಕು ಎಂಬುದು ಸರಕಾರದ ಕಾರ್ಯಶೈಲಿ” ಎಂದು ಟೀಕಿಸಿದರು.

“ಬಹುತೇಕ ಆಡಳಿತ ಪಕ್ಷದ ಶಾಸಕರು ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗೆ ಮುಂದಾಗಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ತೆರೆದಾಗಿ ಹೇಳುತ್ತಾರೆ, ಕೆಲವರು ಒಳಗೊಳಗೇ ಸಂಕಟಿಸುತ್ತಿದ್ದಾರೆ” ಎಂದರು. “ವಿಪಕ್ಷ ಶಾಸಕರ ಸ್ಥಿತಿ ಇನ್ನೂ ಕಷ್ಟಕರವಾಗಿದೆ” ಎಂಬ ಅಭಿಪ್ರಾಯವನ್ನೂ ಅವರು ಶೇರ್ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭ್ರಷ್ಟಾಚಾರದ ಕುರಿತಂತೆ ಗಂಭೀರ ಆರೋಪ ಕೇಳಿಬಂದ ನಂತರ, ಸಂಬಂಧಿತ ಶಾಸಕರನ್ನು ಕರೆದು ಮಾತನಾಡುವುದಾಗಿ ಹೇಳುತ್ತಿರುವುದನ್ನು ಸಿ.ಟಿ. ರವಿ ಕಿಡಿಕಾರಿದರು. “ಇದು ಭ್ರಷ್ಟಾಚಾರ ಮುಚ್ಚುಹಾಕುವ ತಂತ್ರವಲ್ಲದೆ ಏನು? ಗೃಹಮಂತ್ರಿ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ನೀಡಬೇಕು. ಬಡವರಿಗೆ ನೀಡಬೇಕಾದ ಮನೆಗಳ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ನ್ಯಾಯದ ಪರಿಪಾಲನೆಗಾಗಿ ಸ್ವತಂತ್ರ ನ್ಯಾಯಾಧೀಶ ನೇಮಕ ಮಾಡಿ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

You may have missed