ಕಳಸಾ-ಬಂಡೂರಿ ; ಮಹದಾಯಿ ತಡೆಗೋಡೆ ಧ್ವಂಸ ಚಳವಳಿ

0
mahadayi kalasa banduri

ಕಳಸಾ-ಬಂಡೂರಿ ಯೋಜನೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ನರಗುಂದ ಮತ್ತು ನವಲಗುಂದದಲ್ಲಿ ನೂರು ದಿನಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಇದುವರೆಗೂ ಯೋಜನೆ ಮಾತ್ರ ಕಾರ್ಯಗತವಾಗಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್, ಸೋಮವಾರ  ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿರುವ ಮಹದಾಯಿ ತಡೆಗೋಡೆ ಧ್ವಂಸಗೊಳಿಸಲು ಹುಬ್ಬಳ್ಳಿಯಲ್ಲಿ ಗುದ್ದಲಿ ಚಳವಳಿ ನಡೆಸಿದರು.

ರಾಣಿ ಚೆನ್ನಮ್ಮಾ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಹುಬ್ಬಳ್ಳಿಯಿಂದ ಕಳಸಾ ಬಂಡೂರಿ ವರೆಗೆ ಬೃಹತ್ ಪ್ರತಿಭಟನೆ ಕೈಗೊಂಡರು. ಮಾರ್ಗದುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಡಾಕ್ಟರ್ ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡರು. ಯೋಜನೆ ಅನುಷ್ಠಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವುದರ ಜೊತೆಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು. ಯೋಜನೆ ಈಡೇರದಿದ್ದರೆ ಡಿಸೆಂಬರ್ 26ರಂದು 24 ತಾಸುಗಳ ಕಾಲ ರೈಲು ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

ಧಾರವಾಡದ ಮೂಲಕ ಕಣಕುಂಬಿಯತ್ತ ಪ್ರತಿಭಟನಾಕಾರರು ಲಗ್ಗೆಹಾಕಿದರು. ಖಾನಾಪುರದ ಪಾರಿಶ್ವಾಡ ತಲುಪುತ್ತಿದ್ದಂತೆ ವಾಟಾಳ್ ನಾಗರಾಜ್ ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.  ಪೊಲೀಸ್ ಸರ್ಪಗಾವಲನ್ನ ಭೇದಿಸಿ ಮುನ್ನಗ್ಗಲು ಯತ್ನಿಸಿದಾಗ ವಾಟಾಳ್ ಸೇರಿದಂತೆ ಹಲವರನ್ನು ವಶಕ್ಕೆ ತೆಗೆದುಕೊಂಡರು.

Leave a Reply

Your email address will not be published. Required fields are marked *