ರಿಯಲ್ ಲೈಫ್ ಬಾಯಿಜಾನ್ ; 14 ವರ್ಷಗಳ ಪಾಕ್ ವಾಸ ಅಂತ್ಯ

ರಿಯಲ್ ಲೈಫ್ ಬಾಯಿಜಾನ್ ಗೆ ಮುಕ್ತಿ ಸಿಕ್ಕಿದೆ. 14 ವರ್ಷಗಳ ಕಾಲ ಪಾಕ್ ನಲ್ಲಿ ಆಶ್ರಯ ಪಡೆದಿದ್ದ ಬಿಹಾರ ಮೂಲದ ಮೂಕ ಹಾಗೂ ಕಿವುಡ ಯುವತಿ ಗೀತಾ ಭಾರತಕ್ಕೆ ವಾಪಾಸ್ಸಾಗಿದ್ದು, ಕುಟುಂಬ ಸದಸ್ಯರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಸೋಮವಾರ ಬೆಳಗ್ಗೆ ತನಗೆ ಆಶ್ರಯ ನೀಡಿದ್ದ ಈದಿ ಪೌಂಡೇಷನ್ ನ ಐವರು ಸದಸ್ಯರೊಂದಿಗೆ ಕರಾಚಿ ವಿಮಾನ ನಿಲ್ದಾಣದಿಂದ ಹೊರಟ ಗೀತಾ, ದೆಹಲಿಗೆ ಆಗಮಿಸಿದಳು. ಬಳಿಕ ಆಕೆಯನ್ನು ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಯಿತು. ಪೋಷಕರ ಡಿಎನ್ ಎ ವರದಿಗೂ ಗೀತಾಳ ಡಿಎನ್ ಎ ವರದಿ ಜೊತೆ ಮ್ಯಾಚ್ ಆದ ಬಳಿಕ ಆಕೆಯನ್ನು ಪೋಷಕರ ಸುಪರ್ಧಿಗೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
15 ವರ್ಷಗಳ ಹಿಂದೆ ಲಾಹೋರ್ ರೈಲ್ವೆ ನಿಲ್ದಾಣದಲ್ಲಿ ಸಂಜೋತಾ ರೈಲಿನಲ್ಲಿ ಏಕಾಂಗಿಯಾಗಿ ಕುಳಿತಿದ್ದ ಸುಮಾರು 7ರ ಹರೆಯದ ಗೀತಾಳನ್ನು ಪಾಕಿಸ್ತಾನ ಸೇನೆ ಪತ್ತೆಮಾಡಿತ್ತು. ನಂತರ ಆಕೆಯನ್ನು ಲಾಹೋರ್ ನಲ್ಲಿರುವ ಈದಿ ಫೌಂಡೇಷನ್ ವಶಕ್ಕೆ ಒಪ್ಪಿಸಲಾಗಿತ್ತು. ಕಳೆದ 14 ವರ್ಷಗಳಿಂದ ಈದಿ ಪೌಂಡೇಷನ್ ನಲ್ಲಿ ಆಶ್ರಯ ಪಡೆದಿದ್ದ ಗೀತಾಗೆ ಇದೀಗ 23 ವರ್ಷ. ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಬಾಯಿಜಾನ್ ಚಿತ್ರದ ಬಳಿಕ ಗೀತಾಳ ವಿಚಾರ ಮಾದ್ಯಮಗಳಲ್ಲಿ ಬಯಲಾಯಿತು. ಬಳಿಕ ಆಕೆಯ ಪೋಷಕರು ಗೀತಾಳನ್ನು ತಮಗೆ ಒಪ್ಪಿಸುವಂತೆ ಮನವಿ ಮಾಡಿದರು. ಇದೀಗ ಪಾಕ್ ಸರ್ಕಾರ , ಗೀತಾಳನ್ನು ಭಾರತಕ್ಕೆ ಒಪ್ಪಿಸಿದೆ.
ದಶಕಗಳಿಂದ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಬಿಹಾರ ಮೂಲದ ಮೂಕ ಹಾಗೂ ಕಿವುಡ ಯುವತಿ ಗೀತಾ ಭಾರತಕ್ಕೆ ವಾಪಾಸ್ಸಾಗಿದ್ದು, ಆಕೆಯ ಕುಟುಂಬ ಸದಸ್ಯರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಗೀತಾಳ ತಂದೆ ಹಾಗೂ ಸಹೋದರ ಪ್ರತಿಕ್ರಿಯಿಸಿ, ತಮ್ಮ ಮಗಳು ಹಾಗೂ ತಂಗಿಯ ಆಗಮನ ಹರ್ಷ ತಂದಿದೆ ಎಂದಿದ್ದಾರೆ