ನೀರು ಬಿಡಲು ಬೆದರಿಕೆ ಇತ್ತೇ? ಕಾಂಗ್ರೆಸ್ ಒತ್ತಡ ಇದ್ದೀತೇ?: ಸಿ.ಟಿ.ರವಿ

ct ravi

ಬೆಂಗಳೂರು: ತಮಿಳುನಾಡಿಗೆ ಮುಂಚಿತವಾಗಿಯೇ ನೀರು ಬಿಡಲು ನಿಮಗೇನಾದರೂ ಬೆದರಿಕೆ ಇತ್ತೇ? ಪಾರ್ಟಿಯಿಂದ ಒತ್ತಡ ಇತ್ತೇ? ಬೇಡಿಕೆ ಇಡುವ ಮೊದಲೇ ನೀರು ಬಿಟ್ಟಿದ್ದೇಕೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ಷೇಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಂಡಿಯ ಮೈತ್ರಿಕೂಟದ ಭಾಗವಾಗಲು ನೀರು ಬಿಡಿ ಎಂದು ಡಿಎಂಕೆ ಬೆದರಿಕೆ ಹಾಕಿರಬಹುದು. ಇಲ್ಲವೇ ಕಾಂಗ್ರೆಸ್ ಹೈಕಮಾಂಡ್ ಒತ್ತಡ ಹಾಕಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.

ನೀರು ಬಿಟ್ಟ ಬಳಿಕ ಸರ್ವಪಕ್ಷ ಸಭೆ, ಸಂಸದರ ಸಭೆ ನಡೆಸಿದ್ದನ್ನೂ ಅವರು ಟೀಕಿಸಿದರು. ಬಳಿಕ ಅಹವಾಲು ಮಂಡನೆಯನ್ನು ಆಕ್ಷೇಪಿಸಿದರು. ರಾಜ್ಯದ ರೈತರ ಸಂಕಷ್ಟ ದೂರ ಮಾಡುವುದರ ಬದಲು ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಲಾಭ ಪಡೆಯುವ ಪ್ರಯತ್ನ ಇದ್ದಂತಿದೆ. ಇದಕ್ಕೆ ಕರ್ನಾಟಕ ಬಲಿಪಶು ಆಗಿದೆ ಎಂದು ಸಿ.ಟಿ.ರವಿ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಸರಕಾರವು ಕಾವೇರಿ ನೀರಿನ ವಿಷಯದಲ್ಲಿ ಆರಂಭದಿಂದಲೂ ಅನುಮಾನಾಸ್ಪದವಾಗಿ ನಡೆದುಕೊಂಡಿದೆ. ಅದರ ಪರಿಣಾಮವಾಗಿ ನಮ್ಮ ವಿರುದ್ಧ ತೀರ್ಪು ಬಂದಿದೆ. ವಾಸ್ತವಿಕ ಸ್ಥಿತಿಯನ್ನು ಸುಪ್ರೀಂ ಕೋರ್ಟ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ನಾವು ವಿಫಲವಾಗಿದ್ದೇವೆ ಎಂದು ತಿಳಿಸಿದರು.

ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರವು ತಮಿಳುನಾಡು ಬೇಡಿಕೆ ಮುಂದಿಡುವುದಕ್ಕಿಂತ ಮುಂಚಿತವಾಗಿಯೇ ನೀರು ಬಿಡುವ ಮೂಲಕ ತಮ್ಮ ಉದಾರತೆಯನ್ನು ಪ್ರದರ್ಶನ ಮಾಡಿತ್ತು. ಅದರ ಪರಿಣಾಮವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ 42ರಷ್ಟು ನೀರಿನ ಕೊರತೆ ಇದ್ದರೂ ನೀರು ಬಿಟ್ಟಿದ್ದಾರೆ ಎಂದರು.

ಕೆಆರ್‍ಎಸ್, ಕಬಿನಿ ಮತ್ತಿತರ ಡ್ಯಾಂಗಳು ಖಾಲಿಯಾಗಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಮ್ಮ ನೆರವಿಗೆ ಬರಲಿಲ್ಲ. ಸುಪ್ರೀಂ ಕೋರ್ಟಿನಲ್ಲಿ ನಮಗೆ ಸಹಾಯ ಆಗಬಹುದು ಎಂದುಕೊಂಡಿದ್ದರೂ ಸಹಾಯ ಆಗಿಲ್ಲ. ಮತ್ತೆ 15 ದಿನ ನೀರು ಬಿಡಲು ಸೂಚಿಸಿದ್ದಾರೆ ಎಂದು ವಿವರಿಸಿದರು. ರೈತರು ಸಿಡಿದೆದ್ದಿದ್ದಾರೆ. ಎಲ್ಲ ರೀತಿಯ ಸಂಕಷ್ಟವನ್ನು ಎದುರಿಸಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ ಎಂದು ಅವರು ಎಚ್ಚರಿಸಿದರು.

You may have missed