ಬಿಜೆಪಿಗೆ ಯೋಗೇಶ್ವರ್ ಗುಡ್‌ಬೈ; ಕಾಂಗ್ರೆಸ್ ಪಕ್ಷ ಸೇರಿದ ‘ಸೈನಿಕ’
ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್, ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಡಾ.ಎಂ.ಸಿ. ಸುಧಾಕರ್, ಮಾಜಿ ಸಂಸದ ಡಿ ಕೆ ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಜ್ಯಸಭೆ ಸದಸ್ಯ ಡಾ.ಜಿ.ಸಿ. ಚಂದ್ರಶೇಖರ್, ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಮೊದಲಾದ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಯೋಗೇಶ್ವರ್, ನನ್ನ ರಾಜಕೀಯ ಜೀವನವನ್ನು ನಾವು ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆರಂಭಿಸಿದ್ದೆ. ಕಾಂಗ್ರೆಸ್ ಪಕ್ಷ ಬಿಟ್ಟಿದ್ದೆ. ಈಗ ಮತ್ತೆ ಬಂದಿದ್ದೇನೆ. ನನ್ನ ಮುಂದಿನ ರಾಜಕೀಯ ಭಾಗ ಕಾಂಗ್ರೆಸ್ ನಲ್ಲಿ ಮುಂದುವರಿಯಲಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ ಬೇಸರವಾಗಿದೆ. ಕೆಲವೊಮ್ಮೆ ನಮಗಾಗಿ ನಾವು ಕಟ್ಟಿದ ಮನೆಯಲ್ಲಿ ನಾವು ವಾಸ ಮಾಡಲು ಆಗುವುದಿಲ್ಲ. ಅದೇ ಸಂದರ್ಭ ನನಗೆ ಬಂದಿದೆ ಎಂದರು.
ನಾನಿದ್ದ ಬಿಜೆಪಿ ಜತೆಗೆ ಜೆಡಿಎಸ್ ಪಕ್ಷ ಸೇರಿಕೊಂಡ ನಂತರ ಎನ್ಡಿಎ ಮೈತ್ರಿಕೂಟದಲ್ಲಿ ಇದ್ದ ವಾತಾವರಣ ನನ್ನ ರಾಜಕೀಯ ಬೆಳವಣಿಗೆಗೆ ಪೂರಕವಾಗಿರಲಿಲ್ಲ ಎಂದು ಮನಗಂಡು ಸ್ವಯಂಪ್ರೇರಿತವಾಗಿ ಬೇಷರತ್ತಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದ ಅವರು, ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದು ನಮ್ಮ ಗುರಿ. ಡಿ.ಕೆ. ಶಿವಕುಮಾರ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಕಳೆದ ಮೂರ್ನಾಲ್ಕು ತಿಂಗಳಲ್ಲಿ ತೆಗೆದುಕೊಂಡಿರುವ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಮೆಚ್ಚಿ. ಇದರಲ್ಲಿ ನಾನು ಕೈಬಿಟ್ಟು ಹೋಗುತ್ತಿದ್ದೇನೆ ಎಂದು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ನಾನು ಪಾಲುದಾರನಾಗಬೇಕು. ಸರ್ಕಾರದ ಜತೆ ಕೈಜೋಡಿಸಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಲು ಈ ತೀರ್ಮಾನ ಮಾಡಿದ್ದೇನೆ ಎಂದರು.