ಸಿದ್ದರಾಮಯ್ಯರ ಭ್ರಷ್ಟ ಆಡಳಿತಕ್ಕೆ ಪಿಎಸ್‌ಐ ಬಲಿ, ಈ ಸರ್ಕಾರ ತೊಲಗಲೇಬೇಕು ಎಂದ ಅಶೋಕ್
ಬೆಂಗಳೂರು: ಯಾದಗಿರಿಯ ಪಿಎಸ್‌ಐ ಪರಶುರಾಮ್ ವರ್ಗಾವಣೆಗಾಗಿ ಲಂಚ ಕೊಡಲಾಗದೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಜನರನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಹೃದಯಾಘಾತವಾಗುವಂತೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಕೈಗೊಂಡಿರುವ ಮೈಸೂರು ಪಾದಯಾತ್ರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, 187 ಕೋಟಿ ರೂ. ಹಣ ಉಳಿಸಲು ಹೋಗಿ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಈಗ ಪಿಎಸ್‌ಐ ಸತ್ತಿದ್ದಾರೆ. ಈ ಸರ್ಕಾರ ಯಾವುದೇ ಅಧಿಕಾರಿಗಳನ್ನು ಬಿಡುವುದಿಲ್ಲ ಎಙದರು.
ಸಿದ್ದರಾಮಯ್ಯ ಅವರಿಗೆ ಇನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಯಲು ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗುವುದು ಸೂಕ್ತ. ಕಾಂಗ್ರೆಸ್‌ನ ಲಂಚಾವತಾರದ ವಿರುದ್ಧ ನಿಲ್ಲುವವರಿಗೆ ಬಿಜೆಪಿ ಸದಾ ಬೆಂಬಲ ನೀಡಲಿದೆ. ಅಂತಹವರ ಪರವಾಗಿ ನಾನು ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಅಶೋಕ್ ತಿಳಿಸಿದರು.