ಬೆಂಗಳೂರಿನಲ್ಲಿ ಭೂಸ್ವಾದೀನಪಡಿಸಿದರೆ ಎಕರೆಗೆ 12.1 ಕೋ.ರೂ., ಮೈಸೂರಿನಲ್ಲಿ 62 ಕೋ.ರೂ.; ಇದು ಹೇಗೆ ಸಾಧ್ಯ?
ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲಿ ಭೂಸ್ವಾದೀನಪಡಿಸಿದರೆ ಎಕರೆಗೆ 12.1 ಕೋಟಿ ರೂಪಾಯಿ, ಮೈಸೂರಿನಲ್ಲಿ 62 ಕೋಟಿ ರೂಪಾಯಿ. ಇದು ಹೇಗೆ ಸಾಧ್ಯ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ನಾಯಕ, ಮಾಜಿ ಸಚಿವ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಮುಡಾ ಹಗರಣ ಕುರಿತಂತೆ ಸಿಎಂ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ ಹೇಳಿಕೆ ಬಿಡುಗಡೆ ಮಾಡಿರುವ ಸುರೇಶ್ ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮೈಸೂರಿನಲ್ಲಿ “ಜನಾಂದೋಲನ” ನಡೆಯುತ್ತಿರುವ ಈ ಸಂದರ್ಭದಲ್ಲಿ ಅತ್ಯಂತ ಮಹತ್ವದ ಕೋರಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಕೆಐಎಡಿಬಿ ಬೆಂಗಳೂರು ಉತ್ತರ ತಾಲೂಕಿನ ಹೆಬ್ಬಾಳ ಮತ್ತು ಹೆಬ್ಬಾಳ ಅಮಾನಿಕೆರೆ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಪ್ರತಿ ಎಕರೆ ಭೂಮಿಗೆ 12.10 ಕೋಟಿ ರೂ. ದರ ನಿಗದಿಪಡಿಸಿದೆ.ಇದು ಮಾರುಕಟ್ಟೆ ದರಕ್ಕಿಂತ ತುಂಬಾ ಕಡಿಮೆ ಎಂದು ಭಾವಿಸುತ್ತೇನೆ. ಆದರೆ ತಮ್ಮ ಮೈಸೂರಿನ ಹೊರವಲಯದ ಕೆಸರೆ ಗ್ರಾಮದಲ್ಲಿ 3.16 ಎಕರೆ ಜಮೀನಿನ ಬೆಲೆ 62 ಕೋಟಿ ರೂಪಾಯಿ ಎಂಬುದು ನಿಮ್ಮ ಹೇಳಿಕೆಯಿಂದಲೇ ತಿಳಿದುಬಂದಿದೆ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ
ಮುಖ್ಯಮಂತ್ರಿಯ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ಭೂಸ್ವಾಧೀನದ ಎಲ್ಲಾ ಪ್ರಕರಣಗಳಲ್ಲಿ ಭೂಸ್ವಾಧೀನಕ್ಕೆ ಪರಿಹಾರವನ್ನು ಹೆಚ್ಚಿಸಬೇಕುಬೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎಲ್ಲಾ ರೀತಿಯ (ಬಿಡಿಎ, ನೀರಾವರಿ, ಮೆಟ್ರೋ, ಹೆದ್ದಾರಿ…) ಭೂಸ್ವಾಧೀನ ಪ್ರಕರಣಗಳಲ್ಲಿ ಪರಿಹಾರವನ್ನು ನಿಗದಿಪಡಿಸುವಾಗ ಸರ್ಕಾರವು ಕೆಸರೆ ಗ್ರಾಮದ 62 ಕೋಟಿ ರೂ ಗಳನ್ನೇ ಮಾನದಂಡ ದರವಾಗಿ ಇರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿರುವ ಸುರೇಶ್ ಕುಮಾರ್, ಮುಖ್ಯಮಂತ್ರಿಗಳಿಗೆ ಅನ್ವಯಿಸುವ ದರ ಶ್ರೀಸಾಮಾನ್ಯನಿಗೂ ಅನ್ವಯಿಸಬೇಕಲ್ಲವೇ? ಇದಕ್ಕೆ ಸಾಮಾಜಿಕ ನ್ಯಾಯವೆಂದು ಹೇಳುತ್ತಾರೆ ಎಂದು ಅಭಿಪ್ರಾಯ ಮುಂದಿಟ್ಟಿದ್ದಾರೆ..