ಕಳಸಾ ಬಂಡೂರಿ, ಮಹದಾಯಿ ನದಿ ತಿರುವು ಯೋಜನೆಗೆ ಆಗ್ರಹಿಸಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ರೈತರ ಹೋರಾಟ 100ನೇ ದಿನ ಪೂರೈಸಿದೆ. ಎಲ್ಲೆಡೆ ನವರಾತ್ರಿ ಸಡಗರ ಕಂಡುಬಂದರೆ, ಈ ರೈತರ ಪಾಳಯದಲ್ಲಿ ಮಾತ್ರ ಯಾವುದೇ ಸಂಭ್ರಮ ಇಲ್ಲ. ಹಾಗಾಗಿ, ರೈತರು ಹೋರಾಟದ ಅಖಾಡದಲ್ಲೇ ತಮ್ಮದೇಶೈಲಿಯಲ್ಲಿ ದಸರಾ ಆಚರಿಸಿದರು. ಈ ಸನ್ನಿವೇಶಕ್ಕೆ ಹುಬ್ಬಳ್ಳಿ ಸಾಕ್ಷಿಯಾಯಿತು. ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿ ರೈತರು, ಎತ್ತು, ಬಂಡಿಗಳು ಹಾಗೂ ರೈತಾಪಿ ವರ್ಗ ಬಳಸುವ ಪರಿಕರಗಳಿಗೆ ಪೂಜೆ ಸಲ್ಲಿಸಿದರು.

ಈ ಮಧ್ಯೆ ರೈತ ಬಂಡಾಯದ ನಾಡು ಗದಗ್ ಜಿಲ್ಲೆ ನವಲಗುಂದದಲ್ಲಿ ಕಳಸಾ ಬಂಡೂರಿ ಹಾಗೂ ಮಲಪ್ರಭಾ ಜೋಡಣೆಗೆ ನಡೆಯುತ್ತಿರುವ ಹೋರಾಟ ನೂರು ದಿನ ಪೂರೈಸಿದೆ. ನರಗುಂದದ ರೈತ ಹುತಾತ್ಮ ಸ್ಮಾರಕದ ಬಳಿ ರೈತ ಸೇನೆ ಹಾಗೂ ಸಾವಿರಾರು ಹೋರಾಟಗಾರರು ನೂರು ದಿನಗಳಿಂದ ಹೋರಾಟ ನಡೆಸುತ್ತಿದ್ದರು, ಸರ್ಕಾರ ಸ್ಪಂದಿಸಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಹಾಗಾಗಿ, ಇನ್ನು ಮುಂದೆ ಅಸಹಕಾರ ಚಳವಳಿ ಹಾಗೂ ಸರದಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದಾರೆ. ಈ ಹೋರಾಟ ಸಂದರ್ಭಧಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ರೈತ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್, ಕಳಸಾ ಬಂಡೂರಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯವಹಿಸಿದೆ ಎಂದು  ಆಕ್ರೋಶ ವ್ಯಕ್ತಪಡಿಸಿದರು. ರೈತರು ನಡೆಸುತ್ತಿರುವ ಪ್ರತಿಭಟನೆ ನೂರು ದಿನ ಪೂರೈಸಿದರೂ ಎಮ್ಮೆ ಚರ್ಮದ ಜನಪ್ರತಿನಿದಿಗಳು ಮಾತ್ರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದು  ಬೆಂಗಳೂರಿನಲ್ಲಿ 100ನೇ ದಿನವನ್ನು ಕರಳಾ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿದರು. ಅಷ್ಟೇ ಅಲ್ಲ, ಈ ತಿಂಗಳ 26ರಂದು ಕಣಕುಂಬಿಗೆ ಮುತ್ತಿಗೆ ಹಾಕಿ ತಡೆಗೋಡೆ ಒಡೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

You may have missed