ಹಿಜ್ಬೊಲ್ಲಾ ರಾಕೆಟ್ ದಾಳಿಗೆ ಇಸ್ರೇಲ್ ಪ್ರತೀಕಾರ, ಭಾರೀ ವಾಯುದಾಳಿ

0
Iran-Israel war- Tehran 2

ಬೈರುತ್: ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ಹಾರಿಸಿದ ರಾಕೆಟ್‌ಗಳ ಬೆನ್ನಲ್ಲೇ, ಸೋಮವಾರ ಮುಂಜಾನೆ ಲೆಬನಾನ್ ರಾಜಧಾನಿ ‘ಬೈರುತ್’ನ ದಕ್ಷಿಣ ಉಪನಗರಗಳು ಭಾರೀ ಸ್ಫೋಟಗಳ ನಡುಕದಲ್ಲಿ ತತ್ತರಿಸಿದವು. ಸ್ಥಳೀಯ ವಾಹಿನಿ ಅಲ್-ಜದೀದ್ ವರದಿ ಪ್ರಕಾರ, ಇಸ್ರೇಲಿ ಯುದ್ಧವಿಮಾನಗಳು ತೀವ್ರವಾದ ವಾಯುದಾಳಿ ನಡೆಸಿವೆ.

ಇಸ್ರೇಲ್ ದಾಳಿಯ ಪ್ರಮುಖ ಗುರಿಯಾಗಿದ್ದು, ಹೆಜ್ಬೊಲ್ಲಾ ಬಲಗೈ ಎಂದು ಕರೆಯಲ್ಪಡುವ ದಹಿಯೆಹ್ ಪ್ರದೇಶ. ಭಾರೀ ಸ್ಫೋಟಗಳ ಶಬ್ದಕ್ಕೆ ಬೆಚ್ಚಿಬಿದ್ದ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಓಡಿಹೋದರು. ಪೀಡಿತ ಪ್ರದೇಶಗಳಿಗೆ ಆಂಬ್ಯುಲೆನ್ಸ್‌ಗಳು ಧಾವಿಸಿದವು. ಸಾವುನೋವುಗಳ ಅಧಿಕೃತ ಅಂಕಿಅಂಶಗಳು ತಕ್ಷಣ ಲಭ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿವೆ.

ಲೆಬನಾನ್‌ನ ಶಸ್ತ್ರಸಜ್ಜಿತ ಸಂಘಟನೆ ಹೆಜ್ಬೊಲ್ಲಾ ಹೇಳಿಕೆಯಲ್ಲಿ, ಇಸ್ರೇಲ್ ಕಡೆಗೆ ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ಹಾರಿಸಿರುವುದಾಗಿ ಒಪ್ಪಿಕೊಂಡಿದೆ. ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಸಂಘಟನೆ ಸ್ಪಷ್ಟಪಡಿಸಿದೆ.

ಹೆಜ್ಬೊಲ್ಲಾ ಹೇಳಿಕೆ ಪ್ರಕಾರ, ಹೈಫಾದ ದಕ್ಷಿಣದಲ್ಲಿರುವ ಮಿಶ್ಮಾರ್ ಹಕಾರ್ಮೆಲ್ ಕ್ಷಿಪಣಿ ರಕ್ಷಣಾ ತಾಣವನ್ನು ಸುಧಾರಿತ ರಾಕೆಟ್‌ಗಳು ಹಾಗೂ ಡ್ರೋನ್‌ಗಳ ಮೂಲಕ ಗುರಿಯಾಗಿಸಲಾಗಿದೆ.

ಲೆಬನಾನ್ ಪ್ರಧಾನಿ ನವಾಫ್ ಸಲಾಮ್ ರಾಕೆಟ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ದೇಶವನ್ನು ಮತ್ತಷ್ಟು ಸಂಘರ್ಷದ ಅಗ್ನಿಕುಂಡಕ್ಕೆ ಎಳೆಯಲು ನಾವು ಅವಕಾಶ ನೀಡುವುದಿಲ್ಲ. ಜವಾಬ್ದಾರಿಯುತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಎಚ್ಚರಿಸಿದರು.

ದಕ್ಷಿಣ ಲೆಬನಾನ್‌ನಿಂದ ರಾಕೆಟ್ ಉಡಾವಣೆಯು ದೇಶದ ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಮತ್ತು ಇಸ್ರೇಲ್‌ಗೆ ದಾಳಿಗಳನ್ನು ಮುಂದುವರಿಸಲು ನೆಪ ಒದಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇಸ್ರೇಲ್ ಸೇನೆಯ ಪ್ರಕಾರ, ಹೆಜ್ಬೊಲ್ಲಾ ದಾಳಿಗೆ ಪ್ರತಿಯಾಗಿ ಲೆಬನಾನ್‌ನಾದ್ಯಂತ “ಬಲವಾದ” ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ. ಸರ್ಕಾರಿ ಸ್ವಾಮ್ಯದ ಕಾನ್ 11 ವರದಿ ಪ್ರಕಾರ, ಬೈರುತ್‌ನ ದಹಿಯೆಹ್ ಪ್ರದೇಶದಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ.

ಹೆಜ್ಬೊಲ್ಲಾ ದಾಳಿಯ ಪರಿಣಾಮವಾಗಿ ಹೈಫಾ, ಅಪರ್ ಗಲಿಲೀ ಹಾಗೂ ಗೋಲನ್ ಹೈಟ್ಸ್ ಪ್ರದೇಶಗಳಲ್ಲಿ ವಾಯುದಾಳಿ ಸೈರನ್‌ಗಳು ಮೊಳಗಿದವು. ಇಸ್ರೇಲ್ ಸೇನೆ ಕೆಲವು ರಾಕೆಟ್‌ಗಳನ್ನು ತಡೆಹಿಡಿದಿದ್ದು, ಉಳಿದವು ತೆರೆಯಾದ ಪ್ರದೇಶಗಳಲ್ಲಿ ಬಿದ್ದಿವೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *