ಹಗರಣಗಳ ಸರ್ಕಾರ: ಕಾಂಗ್ರೆಸ್ ನ್ಯಾಯಾಲಯದ ಸರ್ಟಿಫಿಕೇಟ್ ಬೇಡ!

ಬೆಂಗಳೂರು: ಸರ್ಕಾರದ ಹಗರಣಗಳ ಬಗ್ಗೆ ಕಾಂಗ್ರೆಸ್ ನ್ಯಾಯಾಲಯದ ಸರ್ಟಿಫಿಕೇಟ್ ಬೇಡ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕಾಂಗ್ರೆಸ್ ನಾಯಕರು ಚೆನ್ನಾಗಿ ಹಣ ನುಂಗಿದ್ದಾರೆ. ಇದರ ವಿರುದ್ಧ ಬಿಜೆಪಿ ಸಮರ್ಥವಾಗಿ ಪ್ರತಿಭಟನೆ ಮಾಡಿದೆ ಎಂದರು.

ಬಿ.ಎಸ್.ಯಡಿಯೂರಪ್ಪನವರ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.‌ ಆದರೆ ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಗೆ ಯಾವುದೇ ತಡೆ ಇಲ್ಲ. ಈ ದೇಶದಲ್ಲಿ ನ್ಯಾಯಾಂಗವೇ ಉನ್ನತವಾದುದು. ಕಾಂಗ್ರೆಸ್ ನ್ಯಾಯಾಲಯದ ಸರ್ಟಿಫಿಕೇಟ್ ಬಿಜೆಪಿಗೆ ಬೇಕಿಲ್ಲ ಎಂದವರು ಹೇಳಿದರು.

ಸಂವಿಧಾನದ ಪ್ರಕಾರ ಸ್ಥಾಪನೆಯಾದ ನ್ಯಾಯಾಲಯದಲ್ಲಿ ಬಿಜೆಪಿಗೆ ಕ್ಲೀನ್ ಚಿಟ್ ದೊರೆಯುತ್ತದೆ. ಆದರೆ ಕಾಂಗ್ರೆಸ್ ತನ್ನನ್ನು ತಾನೇ ನ್ಯಾಯಾಲಯ ಎಂದುಕೊಂಡಿದ್ದು, ಅಂತಹ ವ್ಯವಸ್ಥೆಯ ಅಗತ್ಯ ಯಾರಿಗೂ ಇಲ್ಲ. ದೇಶವನ್ನು ಸುಮಾರು ಅರವತ್ತು ವರ್ಷಗಳ ಕಾಲ ಕಾಂಗ್ರೆಸ್ ಲೂಟಿ ಮಾಡಿದ್ದು, ಅವರಿಗೆ ಯಾವುದೇ ನೈತಿಕತೆ ಇಲ್ಲ. ಅವರ ಕ್ಲೀನ್ ಚಿಟ್ ಯಾರಿಗೂ ಬೇಕಿಲ್ಲ ಎಂದು ಅಶೋಕ್ ಹೇಳಿದರು

You may have missed