ಹಂದಿ ಮಾಂಸ ತಿಂದಿಲ್ಲ. ತಿನ್ನಬೇಕು ಎಂದರೆ ತಿನ್ನುತ್ತೇನೆ ; ಬಿಜೆಪಿಗೆ ಸಿಎಂ ತರಾಟೆ

ರಾಜ್ಯದಲ್ಲಿ ಇದೀಗ ಗೋಮಾಂಸ ಸೇವನೆ ವಿಚಾರ ಕುರಿತಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭರ್ಜರಿ ಜಟಾಪಟಿಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ಜನತಾದರ್ಶನ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋಮಾಂಸ ಸೇವನೆ ವಿಚಾರದಲ್ಲಿ ಬಿಜೆಪಿಯವರು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ತಾವು ಹಂದಿ ಮಾಂಸ ತಿಂದಿಲ್ಲ. ತಿನ್ನಬೇಕು ಎಂದರೆ ತಿನ್ನುತ್ತೇನೆ. ಆಹಾರ ಸೇವನೆ ಅವರವರ ವಿಚಾರಕ್ಕೆ ಬಿಟ್ಟದ್ದು ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ರಾಯಚೂರಿನಲ್ಲಿ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಮುಖ್ಯಮಂತ್ರಿಗಳು ಗೋಮಾಂಸ ತಿನ್ನುವುದಾಗಿ ಹೇಳಿಲ್ಲ. ಆದರೆ ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದರು.
ಬಿಜೆಪಿ ಪಕ್ಷದ ಮುಖಂಡರೊಬ್ಬರು ಗೋಮಾಂಸ ಸರಬರಾಜು ಮಾಡುವುದರಲ್ಲಿ ಭಾಗಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಚಿವ ಖಾದರ್ ತಿರುಗೇಟು ನೀಡಿದರು
