ಸಂಪುಟ ವಿಸ್ತರಣೆ ; ಪರಮೇಶ್ವರ್, ತಹಶೀಲ್ದಾರ್, ಎ. ಮಂಜು, ವಿನಯ್ ಪ್ರಮಾಣ
ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ದಿನಗಳ ಕಾಲ ದೆಹಲಿಗೆ ಭೇಟಿ ನೀಡಿ, ಮಂತ್ರಿಮಂಡಲದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ತುಂಬಲು ಹೈಕಮಾಂಡ್ ನಿಂದ ಹಸಿರು ನಿಶಾನೆ ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಗುರುವಾರ ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವರ ಪದಗ್ರಹಣ ಸಮಾರಂಭ ನಡೆಯಿತು. ರಾಜ್ಯಪಾಲ ವಜುಭಾಯಿ ವಾಲಾ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಂಪುಟ ದರ್ಜೆ ಸಚಿವರಾಗಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಮನೋಹರ್ ತಹಶೀಲ್ದಾರ್ ಪ್ರಮಾಣವಚನ ಸ್ವೀಕರಿಸಿದರೆ, ರಾಜ್ಯ ಸಚಿವರಾಗಿ ಎ. ಮಂಜು ಮತ್ತು ವಿನಯ್ ಕುಲಕರ್ಣಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂತ್ರಿ ಮಂಡಲದ ಸಚಿವರು ಭಾಗವಹಿಸಿದ್ದರು.
ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸಚಿವರ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಸಿದ್ದರಾಮಯ್ಯ ಸಂಪುಟ ಸೈನ್ಯಕ್ಕೆ ಮತ್ತೆ ನಾಲ್ವರು ಸೇರ್ಪಡೆಯಾಗಿದ್ದು, ಈ ಮೂಲಕ 34 ಮಂತ್ರಿಗಳನ್ನೊಳಗೊಂಡ ಸಿದ್ದರಾಮಯ್ಯ ಅವರ ಮಂತ್ರಿಮಂಡಲ ಪರಿಪೂರ್ಣ ಸಂಪುಟವೆನಿಸಿದೆ.
ನೂತನ ಸಚಿವರು ಮತ್ತು ಅವರ ಕುಟುಂಬ ಸದಸ್ಯರಲ್ಲಿ ಹರ್ಷದ ಹೊನಲು ಹರಿಯಿತು. ಸಚಿವರನ್ನು ಅಭಿನಂದಿಸಲು ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳು ಮುಗಿಬಿದ್ದರು. ಇದರಿಂದಾಗಿ ರಾಜಭವನದಲ್ಲಿ ಸಂಭ್ರಮದ ಹೊನಲು ಹರಿಯಿತು. ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದ ಹಿನ್ನೆಲೆಯಲ್ಲಿ ರಾಜಭವನದ ಸುತ್ತ ನಿಷೇಧಾಜ್ಞೆ ವಿಧಿಸಲಾಗಿತ್ತು.
ಪರಮೇಶ್ವರ್ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ಅತ್ತ ತವರು ಜಿಲ್ಲೆ ತುಮಕೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಸಚಿವ ಮನೋಹರ್ ತಹಶೀಲ್ಧಾರ್ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮೈಸೂರಿನಲ್ಲಿ ಕೈವಾರ ತಾತಯ್ಯ ಬಣಜಿಗರ ಸಂಘದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.
ಕುಲಕರ್ಣಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಹುಬ್ಬಳ್ಳಿಯ ದುರ್ಗಾದ ಬೈಲಿನಲ್ಲಿ ಅಭಿಮಾನಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.