ಶಾಲಾ ಮಕ್ಕಳ ಚೀಲದ ತೂಕ; ಶಿಕ್ಷಣ ಇಲಾಖೆಯ ಸುತ್ತೋಲೆ
ಬೆಂಗಳೂರು: ಶಾಲಾ ಮಕ್ಕಳ ಚೀಲದ ಹೊರೆ ತಗ್ಗಿಸುವ ಸಂಬಂಧ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಯಾವ ತರಗತಿಯ ಮಕ್ಕಳಿಗೆ ಎಷ್ಟು ತೂಕದ ಚೀಲದ ಹೊರೆ ಇರಬೇಕೆಂಬ ಬಗ್ಗೆ ಸುತ್ತೋಲೆಯಲ್ಲಿ ಹೇಳಲಾಗಿದೆ.
ವಿದ್ಯಾರ್ಥಿಗಳು ಅವರ ದೇಹದ ತೂಕದ ಶೇಕಡ 10ರಷ್ಟು ತೂಕದ ಶಾಲಾ ಬ್ಯಾಗ್‌ಗಳನ್ನು ಹೊರಬಹುದು ಎಂಬ ಮೂಳೆ ತಜ್ಞರ ಶಿಫಾಸು ಆಧರಿಸಿ ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸುವ ಬಗ್ಗೆ ಶಿಕ್ಷಣ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಎಲ್ಲಾ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಲು ಸೂಕ್ತ ಅಂಶಗಳನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಕ್ಕಳ ಚೀಲದ ತೂಕ ಇಷ್ಟೇ ಇರಬೇಕು:
-
1ರಿಂದ 2ನೇ ತರಗತಿ ವರೆಗಿನ ಮಕ್ಕಳಿಗೆ 1.5 ರಿಂದ 2 ಕಿಲೋ
-
3ರಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ 2 ರಿಂದ 3 ಕಿಲೋ,
-
6ರಿಂದ 8ನೇ ತರಗತಿ ವರೆಗಿನ ಮಕ್ಕಳಿಗೆ 3 ರಿಂದ 4 ಕಿಲೋ,
-
9ರಿಂದ10ನೇ ತರಗತಿ ವರೆಗಿನ ಮಕ್ಕಳಿಗೆ 4 ರಿಂದ 5 ಕಿಲೋ,
ಇದೇ ವೇಳೆ ಹೊಸ ನಿಯಮಾವಳಿಗಳನ್ನು ಶಿಕ್ಷಣ ಇಲಾಖಾ ಆಯುಕ್ತರು ಪ್ರಕಟಿಸಿದ್ದಾರೆ. ಪಠ್ಯ ವಿಚಾರ, ಮನೆ ಪಾಠ, ಹೋಂವರ್ಕ್ ಬಗ್ಗೆಯೂ ಮಾರ್ಗಸೂಚಿ ನಿಯಮಗಳನ್ನು ಪ್ರಕಟಿಸಲಾಗಿದೆ. ಈ ಕುರಿತ ಹೈಲೈಟ್ಸ್ ಹೀಗಿದೆ.
-
1 ಮತ್ತು 2ನೇ ತರಗತಿ ಬೋಧನೆಯು ಬುನಾದಿ ಹಂತದ ಶಿಕ್ಷಣವಾಗಿದ್ದು ವಿದ್ಯಾರ್ಥಿಗಳು ಸಂತಸ ಮತ್ತು ಸಕ್ರಿಯವಾಗಿ ಶಾಲೆಗಳಲ್ಲಿಯೇ ಚಟುವಟಿಕೆ ಮೂಲಕ ಕಲಿಯಲು ಆದ್ಯತೆ ನೀಡುವುದು. ಈ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಗೃಹಪಾಠ ಅಥವಾ ಮನೆಗೆಲಸವನ್ನು ನೀಡದಂತೆ ಕ್ರಮವಹಿಸುವುದು.
-
1 ರಿಂದ 5ನೇ ತರಗತಿಗಳ ವಿದ್ಯಾರ್ಥಿಗಳಿಗೆ ಭಾಷೆ, ಗಣಿತ ಹಾಗೂ ಪರಿಸರ ವಿಜ್ಞಾನ ವಿಷಯ ಹೊರತುಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸದಂತೆ ಕ್ರಮವಹಿಸುವುದು.
-
6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲಿಕಾ ಬಲವರ್ಧನೆ ಚಟುವಟಿಕೆಗಳನ್ನು ಶಾಲೆಗಳಲ್ಲೇ ನಿರ್ವಹಿಸುವುದು ಅತ್ಯಂತ ಅಗತ್ಯವಿರುವ ಹಾಗೂ ಪೂರಕವಾಗಿರುವಂತಹ ಚಟುವಟಿಕೆಗಳಿಗೆ ಸೀಮಿತ ಪ್ರಮಾಣದಲ್ಲಿ ಮನೆಗೆಲಸ ನೀಡುವುದು.
-
ವಿದ್ಯಾರ್ಥಿಗಳು ಕಲಿಕೆಯ ಎಲ್ಲಾ ಪಠ್ಯ ಪುಸ್ತಕಗಳು, ನೋಟ್ ಪುಸ್ತಕಗಳು ಮತ್ತು ಅಭ್ಯಾಸ ಪುಸ್ತಕಗಳನ್ನು ಪ್ರತಿ ದಿನವು ತರುವುದನ್ನು ತಪ್ಪಿಸಲು ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಆಯಾ ದಿವಸದ ವೇಳಾಪಟ್ಟಿಗೆ ಅನುಗುಣವಾಗಿ ಅಗತ್ಯವಿರುವ ಪುಸ್ತಕಗಳನ್ನು ಮಾತ್ರ ಶಾಲೆಗೆ ತರಲು ಸೂಚನೆ ನೀಡುವುದು.
-
ಅಭ್ಯಾಸ ಚಟುವಟಿಕೆಗಳನ್ನು ಹಾಳೆಗಳಲ್ಲಿ ಮಾಡಿಸಿ ಫೈಲ್ ಮಾಡಿಸುವುದು. ಅವಶ್ಯಕತೆ ಇದ್ದಾಗ ಪರಾಮರ್ಶಿಸಲು ಇವುಗಳನ್ನು ಶಾಲೆಗಳಲ್ಲಿಯೇ ಸಂಗ್ರಹಿಸಿಡಲು ಪ್ರೇರೇಪಿಸುವುದು ಅಥವಾ ಅಭ್ಯಾಸ ಪುಸ್ತಕಗಳನ್ನು ಬಳಸಿದಲ್ಲಿ ಇವುಗಳನ್ನು ಶಾಲೆಗಳಲ್ಲಿಯೇ ಸಂಗ್ರಹಿಸಿಡತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.