‘ವಿಜಯೇಂದ್ರ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ’; ಆರ್.ಅಶೋಕ್
ಬೆಂಗಳೂರು: ಮಾಜಿ ಸಚಿವ ಶ್ರೀರಾಮುಲು ಅವರು ಬಿಜೆಪಿ ತ್ಯಜಿಸಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ, ಯಾವುದೇ ಟೀಮ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದಲ್ಲಿ ಗೊಂದಲ ಇರುವುದು ನಿಜ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಶ್ರೀರಾಮುಲು ಅವರೊಂದಿಗೆ ನಾನು ಹಾಗೂ ಬಸವರಾಜ ಬೊಮ್ಮಾಯಿ ಚರ್ಚಿಸಲಿದ್ದೇವೆ ಎಂದವರು ತಿಳಿಸಿದರು.
ನಮ್ಮಲ್ಲಿ ಯಾವುದೇ ಟೀಮ್ ಇಲ್ಲ. ನಾನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ. ಆದರೂ ದೂರು ನೀಡಿದ್ದೇನೆ ಎಂದು ಸುಳ್ಳಾಗಿ ಪತ್ರಿಕೆಯಲ್ಲಿ ಬರೆಯಲಾಗಿದೆ. ಒಕ್ಕಲಿಗರು ಪ್ರತ್ಯೇಕವಾಗಿ ಸಭೆ ಮಾಡಿಲ್ಲ ಅಥವಾ ಗುರುತಿಸಿಕೊಂಡಿಲ್ಲ. ಇದು ಕೂಡ ಸುಳ್ಳು ಸುದ್ದಿ ಎಂದು ಅಶೋಕ್ ಸ್ಪಷ್ಟಪಡಿಸಿದರು.