ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಶೇ.100ರಷ್ಟು ನಿಗದಿತ ಗುರಿಯನ್ನು ಸಾಧಿಸಬೇಕು; ಅಧಿಕಾರಿಗಳಿಗೆ ಸಿಎಂ ತಾಕೀತು

0
vidhanasoudha

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಗೆ 2025-26 ನೇ ಹಣಕಾಸು ಸಾಲಿನಲ್ಲಿ ರೂ. 1,20,000 ಕೋಟಿ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ತೆರಿಗೆ ಸಂಗ್ರಹ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನವೆಂಬರ್‌ ಅಂತ್ಯದವರೆಗೆ ರೂ. 80 ಸಾವಿರ ಕೋಟಿ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ನಿವ್ವಳ ಸಂಗ್ರಹ ರೂ.72,131 ಕೋಟಿ ಮಾಡಲಾಗಿದ್ದು, ಶೇಕಡಾವಾರು ಶೇ.90 ಸಾಧನೆ ಮಾಡಲಾಗಿದೆ. ಇದರಲ್ಲಿ ಜಿಎಸ್‌ಟಿ ರೂ.53,522 ಕೋಟಿ, ಕೆಎಸ್‌ಟಿ ರೂ.17,595 ಕೋಟಿ ಮತ್ತು ವೃತಿ ತೆರಿಗೆ ರೂ.1,014 ಕೋಟಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದ್ದಾರೆ.

ಆರಂಭದ ಐದು ತಿಂಗಳಲ್ಲಿ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ ಶೇ.12ರಷ್ಟು ಬೆಳವಣಿಗೆ ದರ ಸಾಧಿಸಲಾಗಿದೆ. ಆದರೆ ಜಿಎಸ್‌ಟಿ ದರಗಳಲ್ಲಿ ಬದಲಾವಣೆ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಕಳೆದ ಮೂರು ತಿಂಗಳಲ್ಲಿ ಕೇವಲ ಶೇ.3ರಷ್ಟು ಬೆಳವಣಿಗೆ ದರ ಸಾಧ್ಯವಾಗಿದೆ ಎಂದಿದ್ದಾರೆ.

ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಶೇ.100ರಷ್ಟು ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಅವರು, ನವೆಂಬರ್ ಅಂತ್ಯದವರೆಗೆ ಸುಮಾರು 13 ಸಾವಿರ ತಪಾಸಣೆಗಳನ್ನು ಮಾಡಿದ್ದು, ತಪಾಸಣೆಯಿಂದ ರೂ. 3,183 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

ವಾಣಿಜ್ಯ ತೆರಿಗೆ ವಿಚಕ್ಷಣಾ ದಳ ತೆರಿಗೆ ಕಳ್ಳತನವನ್ನು ತಪ್ಪಿಸಲು ನಿರಂತರ ತಪಾಸಣೆಗಳನ್ನು ಕೈಗೊಳ್ಳಬೇಕು. ತೆರಿಗೆ ತಪ್ಪಿಸಲು ಯಾವುದೇ ಅವಕಾಶ ಇಲ್ಲದಂತೆ ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಹಿಂದಿನ ವರ್ಷಗಳ ಅಂಕಿ ಅಂಶಗಳನ್ನು ಬಳಸಿಕೊಂಡು, ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಿ, ಅನಾಲಿಸಿಸ್ ವಿಭಾಗವನ್ನು ಬಲಪಡಿಸಬೇಕು.

ಬೋಗಸ್ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪ್ರಕರಣಗಳ ಮೇಲೆ ನಿಗಾ ಇರಿಸಿ ಅಂತಹ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ ಎಂದವರು ಹೇಳಿದ್ದಾರೆ.

2025-26 ನೇ ಹಣಕಾಸು ಸಾಲಿನಲ್ಲಿ ರೂ. 43,000 ಕೋಟಿ ಅಬಕಾರಿ ತೆರಿಗೆ ಗುರಿಯನ್ನು ನಿಗದಿಪಡಿಸಲಾಗಿದ್ದು, ನವೆಂಬರ್‌ ಅಂತ್ಯದವರೆಗೆ ರೂ.26,215 ಕೋಟಿ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಬಕಾರಿ ತೆರಿಗೆ ಸಂಗ್ರಹದಲ್ಲಿ ಶೇ.10.46ರಷ್ಟು ಬೆಳವಣಿಗೆ ದರವನ್ನು ಸಾಧಿಸಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.

ನಿಗದಿತ ಗುರಿಯನ್ನು ಸಾಧಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. .

Leave a Reply

Your email address will not be published. Required fields are marked *

You may have missed