ರಾಯಚೂರಲ್ಲಿ ಬೈಕ್-ಟ್ರಕ್ ಡಿಕ್ಕಿ: ಮೂವರು ಯುವಕರು ಸಾವು

ರಾಯಚೂರು: ನಗರದ ಬಸವೇಶ್ವರ ವೃತ್ತದಲ್ಲಿ ಬೈಕ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಮೊಹಮ್ಮದ್ ಅಲಿ (24), ನೂರ್ ಮೊಹಮ್ಮದ್ (19) ಮತ್ತು ಫಯಾಜ್ (26) ಎಂದು ಗುರುತಿಸಲಾಗಿದೆ. ಇವರು ನಗರದ ಸುಖಾಣಿ ಕಾಲೋನಿಯ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದ ಕಡೆ ಸಾಗುತ್ತಿದ್ದ ಬೈಕ್‌ಗೆ ಹೈದರಾಬಾದ್ ಮಾರ್ಗದಿಂದ ಮಂತ್ರಾಲಯದ ಕಡೆ ತೆರಳುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮೂವರೂ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಅಪಘಾತದ ಬಳಿಕ ಟ್ರಕ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ರಾಯಚೂರು ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
