ರಸಂ ರುಚಿ ನೆಪ: ಮದುವೆ ಮಂಟಪದಿಂದ ವರ ಪರಾರಿ…!
ತುಮಕೂರು: ತಾಳಿ ಕಟ್ಟುವ ಸಂದರ್ಭದಲ್ಲೂ ವರದಕ್ಷಣೆ ನೀಡಲಿಲ್ಲ ಎಂದು ವರನ ಕಡೆಯವರು ಮದುವೆ ಮಂಟಪದಿಂದ ಕಾಲ್ಕಿತ್ತಿದ್ದನು ಕೇಳಿದ್ದೇವೆ. ನೋಡಿದ್ದೇವೆ. ಆದರೆ, ಇಲ್ಲೊಬ್ಬ ಮದುವೆಯಾಗುವ ಭೂಪ ರಸಂ ರುಚಿಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ವಧುವಿಗೆ ತಾಳಿಕಟ್ಟದೆ ಪರಾರಿಯಾದ ಘಟನೆ ಭಾನುವಾರ ಕುಣಿಗಲ್ ನ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದೇ ವೇಳೆ, ವಧುವಿನ ಸಂಬಂಧಿಕನೊಬ್ಬ ಆಕೆಯನ್ನು ಮದುವೆಯಾಗಲು ಮುಂದೆ ಬಂದಿದ್ದು, ಆತನಿಗೆ ವಧುವನ್ನು ಧಾರೆ ಎರೆದು ಕೊಡಲಾಗಿದೆ.
ತುಮಕೂರು ಜಿಲ್ಲೆ ಕುಣಿಗಲ್‌ನ ಸಿದ್ದಾರ್ಥ ನಗರ ನಿವಾಸಿ ಸೌಭಾಗ್ಯಮ್ಮ ಮತ್ತು ಪ್ರಕಾಶ್ ಎಂಬುವರ ಮಗಳು ಕೆ.ಪಿ.ಸೌಮ್ಯ ಅವರ ಮದುವೆ ಬೆಂಗಳೂರಿನ ಶ್ರೀರಾಮಪುರ ಬಳಿಯ ಸ್ವತಂತ್ರಪಾಳ್ಯದ ಗೌರಮ್ಮ ಮತ್ತು ತಿಮ್ಮಯ್ಯ ದಂಪತಿಯ ಪುತ್ರ ರಾಜು ಎಂಬುವರೊಂದಿಗೆ ನಿಶ್ಚಯವಾಗಿತ್ತು. ನಗರದ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಮತ್ತು ಭಾನುವಾರ ಮದುವೆ ನಡೆಯಬೇಕಿತ್ತು. ಅದರಂತೆ ಶನಿವಾರ ಸಂಜೆ 7 ಗಂಟೆಗೆ ಆರತಕ್ಷತೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಊಟದ ವಿಚಾರದಲ್ಲಿ ರಸಂನ ರುಚಿಯ ಬಗ್ಗೆ ಕೆಲವರು ತಕಾರರು ತೆಗೆದಿದ್ದಾರೆ. ರಾತ್ರಿ ಇಡೀ ಮಾತಿನ ಚಕಮಕಿ ನಡೆಯಿತು. ಮೂಹೂರ್ತ ಸಂದರ್ಭದಲ್ಲೂ ಕೆಲವರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇದ್ದರಿಂದಾಗಿ ವರ ಮಹಾಶಯ ತನ್ನ ಸಂಬಂಧಿಗಳೊಂದಿಗೆ ಕಲ್ಯಾಣ ಮಂಟಪದಿಂದ ಕಾಲ್ಕಿತ್ತಿದ್ದಾನೆ.
ಇದರಿಂದ ವಧುವಿನ ಪೋಷಕರು ಕಂಗಾಲಾದರು. ವಧು, ವಧುವಿನ ತಾಯಿ ಕಣ್ಣೀರು ಹಾಕಲಾರಂಭಿಸಿದರು. ಈ ವೇಳೆ, ಮದುವೆಗೆ ಬಂದಿದ್ದ ಹೆಣ್ಣಿನ ಸಂಬಂಧಿ ಮದ್ದೂರಿನ ಗೋವಿಂದರಾಜು ಎಂಬುವರು ತಾನೇ ಮದುವೆಯಾಗುವುದಾಗಿ ಮುಂದೆ ಬಂದರು. ತಕ್ಷಣ ಸಿದ್ದತೆ ನಡೆಸಿದ ಸಂಬಂಧಿಕರು ಗೋವಿಂದರಾಜು ಜತೆ ಸೌಮ್ಯಳ ಮದುವೆ ಮಾಡಿ ನಿಟ್ಟುಸಿರು ಬಿಟ್ಟರು. ಬಳಿಕ, ವಧುವಿನ ಪೋಷಕರು ಪಟ್ಟಣದ ಠಾಣೆಗೆ ದೂರು ನೀಡಿದ್ದು, ಮದುವೆ ಮಂಟಪದಿಂದ ಪಲಾಯನ ಮಾಡಿದ ಬೆಂಗಳೂರು ರಾಜು ಮತ್ತು ಪಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.