ಯೋಗೇಶ್ವರ್ ಗೆದ್ದಿದ್ದಲ್ಲ, ಸ್ವಪಕ್ಷೀಯರೂ, ದೋಸ್ತಿ ನಾಯಕರೇ ‘ನಿಖಿಲ್’ರನ್ನು ಸೋಲಿಸಿದ್ದು?
ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಸೋಲಿಗೆ ಬಿಜೆಪಿ-ಜೆಡಿಎಸ್ ನಾಯಕರೇ ಕಾರಣವೇ? ಇಂಥದ್ದೊಂದು ಚರ್ಚೆ ಆರಂಭವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಆರೆಸ್ಸೆಸ್ ವಿರುದ್ದ ಹಿಗ್ಗಾಮುಗ್ಗ ಬೈಯ್ಯುತ್ತಿದ್ದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಲೋಕಸಭಾ ಚುನಾವಣೆಯಲ್ಲಿ ಅದೇ ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡಿದ್ದಾರೆ. ಈ ಬಾರಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲದೊಂದಿಗೆ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರು ವಿಧಾನಸಭೆ ಪ್ರವೇಶಿಸುತ್ತಿದ್ದರು. ಆದರೆ ತಮ್ಮ ಪಕ್ಷದವರೇ ಕೈಕೊಟ್ಟರೇ ಅಥವಾ ದೋಸ್ತಿ ಪಕ್ಷದವರು ಅಡ್ಡಗಾಲು ಹಾಕಿದರೋ ಗೊತ್ತಿಲ್ಲ. ಜೆಡಿಎಸ್ ಪಕ್ಷಕ್ಕೆ ಮಾತ್ರ ಹೀನಾಯ ಸೋಲಾಗಿದೆ. ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಸಹಿತ ಅನೇಕ ಮುಖಂಡರು ನಿಖಿಲ್ ಪರ ಪ್ರಚಾರದಿಂದ ದೂರ ಉಳಿದಿದ್ದರು. ಬಿಜೆಪಿ ನಾಯಕರೂ ಅಷ್ಟೊಂದು ಉತ್ಸಾಹದಿಂದ ಪ್ರಚಾರ ಕೈಗೊಂಡಿಲ್ಲ ಎಂಬುದು ಹೆಚ್ಡಿಕೆ ಆಪ್ತರ ಅಸಮಾಧಾನದ ಮಾತುಗಳು.
ಡಿಕೆಶಿ ಬಾಂಬ್..!
ಈ ನಡುವೆ, ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ಬಿಜೆಪಿ-ಜೆಡಿಎಸ್ ದೋಸ್ತಿಗಳ ಪಾಳಯದಲ್ಲಿ ಬಿರುಗಾಳಿ ಎಬ್ಬಿಸುವಂತಿದೆ. ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಗೆಲುವಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪ್ರಯತ್ನವಿದೆ ಎಂಬ ಸಂಗತಿಯನ್ನು ಅವರು ಬಹಿರಂಗಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ‘ಈ ಚುನಾವಣೆಯಲ್ಲಿ ಪಕ್ಷಾತೀತವಾಗಿ ಅನೇಕರು ನಮಗೆ ಸಹಾಯ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 16,000 ಮತಗಳನ್ನು ಪಡೆದಿತ್ತು. ಈ ಬಾರಿ ಜೆಡಿಎಸ್ ಮತ್ತು ಬಿಜೆಪಿಯ ಅನೇಕ ನಾಯಕರು ನೇರವಾಗಿ ಮತ್ತು ಪರೋಕ್ಷವಾಗಿ ನಮಗೆ ಬೆಂಬಲ ನೀಡದಿದ್ದಾರೆ ಎಂದರು. ಅಷ್ಟೇ ಅಲ್ಲ, ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕರಿಸಿದ ಬಿಜೆಪಿ-ಜೆಡಿಎಸ್ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ ನಡೆಯೂ ಅಚ್ಚರಿಗೆ ಕಾರಣವಾಯಿತು.