ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ನಟಿ ತಮನ್ನಾ ನೇಮಕಕ್ಕೆ ವ್ಯಾಪಕ ಆಕ್ರೋಶ

ಬೆಂಗಳೂರು: ರಾಜ್ಯದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ತೆಲುಗು ನಟಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಎರಡು ವರ್ಷ 2 ದಿನಕ್ಕೆ ತಮ್ಮನ್ನಾ ಜೊತೆ ಬರೋಬ್ಬರಿ 6.20 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕದ ಉತ್ಪನ್ನಕ್ಕೆ ಕನ್ನಡ ನಟ ನಟಿಯರನ್ನೇ ಆಯ್ಕೆ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ.
ಇದೇ ವೇಳೆ, ತಮ್ಮನ್ನಾ ಆಯ್ಕೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡವರನ್ನೇ ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಕಂಪನಿಯ ಪ್ರಾಥಮಿಕ ಗ್ರಾಹಕರು ಕರ್ನಾಟಕದ ಕನ್ನಡಿಗರಾಗಿದ್ದಾರೆ. ಕನ್ನಡ ನಟಿಯರನ್ನ ಹಾಕೊಂಡ್ರೆ ಲಾಭ ಬರಲ್ವಾ ಎಂದು ಪ್ರಶ್ನಿಸಿರುವ ನಾರಾಯಣ ಗೌಡ, ಮೈಸೂರು ಸ್ಯಾಂಡಲ್ ಸೋಪ್ ಕಂಪನಿ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂ. ತೆತ್ತು ನೇಮಕ ಮಾಡಿರುವುದು ಅವಿವೇಕದ, ಅಸಂಬದ್ಧ, ಅನೈತಿಕ, ಬೇಜವಾಬ್ದಾರಿಯುತ ತೀರ್ಮಾನವಾಗಿದೆ ಎಂದು ಎಂದು ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.