ಮೈಸೂರು ದಸರಾ ಅದ್ಧೂರಿ ಆಗಲಿ; ಹಗರಣ ಆಗದಿರಲಿ
ಬೆಂಗಳೂರು: ಮೈಸೂರು ದಸರಾ ಅದ್ಧೂರಿ ಆಗಲಿ; ಹಗರಣ ಆಗದಿರಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ನಾಡಹಬ್ಬ ಮೈಸೂರು ದಸರಾ ಉತ್ಸವವನ್ನ ಅದ್ಧೂರಿಯಾಗಿ ಆಚರಿಸಬೇಕು ಎಂಬ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದಿರುವ ಅವರು, ಅದ್ಧೂರಿ ದಸರಾವು ಕಾಂಗ್ರೆಸ್ ಸರ್ಕಾರದದ ಮತ್ತೊಂದು ಅದ್ಧೂರಿ ಹಗರಣಕ್ಕೆ ವೇದಿಕೆ ಆಗದಿರಲಿ ಎನ್ನುವುದೇ ಕನ್ನಡಿಗರ ಆಶಯ ಎಂದು ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿದ್ದಾರೆ.
ಕಳೆದ ವರ್ಷ ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂಡಿತ್ ತಾರಾನಾಥ್ ಅವರ ಬಳಿಯೂ ಪರ್ಸಂಟೇಜ್ ಕಮಿಷನ್ ಕೇಳಿ ಕರ್ನಾಟಕದ ಮಾನ ಹಾರಾಜು ಹಾಕಿದ್ದ ಕಾಂಗ್ರೆಸ್ ಸರ್ಕಾರ, ಈ ವರ್ಷವಾದರೂ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿಸದೆ ನಾಡಿನ ಸಂಸ್ಕೃತಿ, ಪರಂಪರೆಯ ಗೌರವ ಉಳಿಸುತ್ತೋ ಅಥವಾ ಈ ವರ್ಷವೂ ಮತ್ತೊಂದು ಭ್ರಷ್ಟಾಚಾರದ ಅಂಬಾರಿ ಹೊತ್ತು ಕನ್ನಡಿಗರ ಮಾನ ಕಳಿಯುತ್ತೋ ಕಾದು ನೋಡಬೇಕು ಎಂದವರು ಪ್ರತಿಪಾದಿಸಿದ್ದಾರೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂದರೆ ಅದು ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ಇಡೀ ದೇಶವೇ, ಪ್ರಪಂಚವೇ ಎದುರು ನೋಡುವ ಇಂತಹ ಉತ್ಸವವನ್ನ ರಾಜ್ಯ ಸರ್ಕಾರ ಅತ್ಯಂತ ಆಸಕ್ತಿ, ಶ್ರದ್ಧೆ, ಭಕ್ತಿಗಳಿಂದ ಆಚರಿಸಬೇಕು. ಇಲ್ಲವಾದರೆ ಈ ಸರ್ಕಾರ ಆ ತಾಯಿ ಚಾಮುಂಡೇಶ್ವರಿಯ ಶಾಪಕ್ಕೆ ಗುರಿಯಾಗುವುದು ನಿಶ್ಚಿತ ಎಂದವರು ಎಚ್ಚರಿಕೆ ನೀಡಿದ್ದಾರೆ.