ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಹಿನ್ನಲೆ: ಮುಂಗಾರು ಹಂಗಾಮಿಗೆ ರಸಗೊಬ್ಬರ ನಿರ್ವಹಣೆಗೆ ಸಚಿವರ ಸೂತ್ರ

ಬೆಂಗಳೂರು: 2026ರ ಮುಂಗಾರು ಹಂಗಾಮಿನ ರಸಗೊಬ್ಬರಗಳ ಸಮರ್ಪಕ ಪೂರೈಕೆ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಕೃಷಿ ಇಲಾಖೆಯು ಕ್ರಮಗಳನ್ನು ಜಾರಿಗೊಳಿಸಿದೆ.
ಮಧ್ಯಪ್ರಾಚ್ಯ ಪ್ರದೇಶದ ಅಸ್ಥಿರತೆ ಹಿನ್ನಲೆ ಗೊಬ್ಬರ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಆಮದು ವ್ಯತ್ಯಯವಾಗುವ ಸಾಧ್ಯತೆ ಕಂಡುಬಂದಿದ್ದು,ರಾಜ್ಯದಲ್ಲಿ ಗೊಬ್ಬರ ಪೂರೈಕೆಗೆ ಅಡ್ಡಿಯಾಗುವ ಆತಂಕ ವ್ಯಕ್ತವಾಗಿದೆ. ಈ ಹಿನ್ನಲೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರ ಉಸ್ತುವಾರಿಯಲ್ಲಿ ಕೃಷಿ ಇಲಾಖೆ ಬಹುಮುಖ ಕ್ರಮಗಳನ್ನು ಅನುಷ್ಠಾನಗೊಳಿಸಿದೆ.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಒಟ್ಟು 30.05 ಲಕ್ಷ ಮೆಟ್ರಿಕ್ ಟನ್ ವಿವಿಧ ಗೊಬ್ಬರಗಳನ್ನು ಹಂಚಿಕೆ ಮಾಡಿದ್ದು, ಏಪ್ರಿಲ್ 1ರ ವೇಳೆಗೆ 11.42 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಲಭ್ಯವಿದೆ.
ರಾಜ್ಯವು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ (KSCMF) ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮ(KSSC) ಮುಖಾಂತರ ಕಾಪು ದಾಸ್ತಾನು ವ್ಯವಸ್ಥೆಯನ್ನು ಬಲಪಡಿಸಿದೆ. ಪ್ರಸ್ತುತ 28224 ಮೆಟ್ರಿಕ್ ಟನ್ ಗೊಬ್ಬರ ಕಾಪು ದಾಸ್ತಾನಿನಲ್ಲಿ ಲಭ್ಯವಿದ್ದು, ಯೂರಿಯಾ ಮತ್ತು ಡಿ.ಎ.ಪಿ ಗೊಬ್ಬರಗಳ 25% ಕಡ್ಡಾಯವಾಗಿ ಸಂಗ್ರಹಿಸಲು ನಿರ್ದೇಶಿಸಲಾಗಿದೆ.
ಜಿಲ್ಲಾವಾರು ಗೊಬ್ಬರ ಹಂಚಿಕೆ ಕಳೆದ ಮೂರು ವರ್ಷಗಳ ಸರಾಸರಿ ಬಳಕೆಯನ್ನು ಆಧಾರಿಸಿ ಮರು ನಿರ್ಧಾರ ಮಾಡಲಾಗಿದೆ. ಜೊತೆಗೆ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸೂಕ್ಷ್ಮ ಯೋಜನೆ ರೂಪಿಸಿ ಪೂರೈಕೆ ಸಮಾತೋಲನ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಯುರಿಯಾ ಬಳಕೆಯನ್ನು ನಿಯಂತ್ರಿಸಲು FRUITS(Farmer Registration and Unified beneficiary Information System) ಡೇಟಾ ಬೇಸ್ ಆಧಾರಿತ ಯುರಿಯಾ ಡ್ರಿಸ್ಟೂçಬೂಷನ್ ಆಫ್(Urea Distribution App) ಅಭಿವೃದ್ದಿ ಪಡಿಸಲಾಗಿದ್ದು, ರೈತರ ಭೂ ಹಿಡುವಳಿ ಮತ್ತು ಬೆಳೆ ಮಾದರಿಯನ್ನು ಆಧಾರಿಸಿ ಯುರಿಯಾ ಮಾರಾಟವನ್ನು ನಿಯಂತ್ರಿಸಲಾಗುತ್ತಿದೆ. ಈ ಆಪ್ಲಿಕೇಷನ್ ಈಗಾಗಲೇ ಎಂಟು ಜಿಲ್ಲೆಗಳಲ್ಲಿ ಪ್ರಯೋಗಿಕವಾಗಿ ಜಾರಿಯಲ್ಲಿದ್ದು, ಮುಂದಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ್ಯಾಂತ ವಿಸ್ತಾರಗೊಳ್ಳಲಿದೆ.
ಕೃಷಿ ಹೊರತಾದ ಕೃಷಿ ಚಟುವಟಿಕೆಗಳಿಗೆ ಸಹಾಯಧನದ ಯುರಿಯಾ ದುರುಪಯೋಗವನ್ನು ತಡೆಯಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ FCO-1985 ಮತ್ತು ECA-1985 ನಿಯಮಗಳಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ..
ಅಂತರಾಜ್ಯ ಗಡಿಗಳಲ್ಲಿ ಚೆಕ್‌ಪೋಸ್ಟ್ ಗಳ ಮೂಲಕ ಯುರಿಯಾ ಅನಧಿಕೃತ ಸಾಗಣೆಯನ್ನು ತಡೆಯಲು ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ. ಜೊತೆಗೆ ಪ್ರತಿ ವಾರ ವಿಡಿಯೋ ಕಾನ್ಪರೆನ್ಸ್ ಸಭೆಗಳ ಮೂಲಕ ಗೊಬ್ಬರ ಪೂರೈಕೆ, ಮಾರಾಟ ಮತ್ತು ಸಂಗ್ರಹ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
ರೈತರಲ್ಲಿ ಸಮತೋಲಿತ ಗೊಬ್ಬರ ಬಳಕೆ ಸಾವಯವ ಕೃಷಿ, ಜೈವಿಕ ಗೊಬ್ಬರ ಮತ್ತು ನೈಸರ್ಗಿಕ ಕೃಷಿ ಕುರಿತು ಕಾಗೃತಿ ಮೂಡಿಸಲಾಗುತ್ತದೆ.
“ವಸುಧಾಮೃತ” ಯೋಜನೆಯಡಿ ರೈತರಿಗೆ ರಿಯಾಯಿತಿ ದರದಲ್ಲಿ ಸಾವಯವ ಹಾಗೂ ಜೈವಿಕ ಗೊಬ್ಬರಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ಒಟ್ಟಾರೆ 2026ರ ಮುಂಗಾರು ಹಂಗಾಮಿನಲ್ಲಿ ಗೊಬ್ಬರ ಕೊರತೆ ಉಂಟಾಗದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರ ನೇತೃತ್ವದಲ್ಲಿ ಮತ್ತು ಮೇಲ್ವಿಚಾರಣೆಯ ಮೂಲಕ ಕೃಷಿ ಇಲಾಖೆಯು ಮತ್ತಷ್ಟು ಮುನ್ನೆಚ್ಚರಿಕಾ ಹಾಗೂ ನಿಯಂತ್ರಣ ಕ್ರಮಗಳನ್ನು ಕಠಿಣವಾಗಿ ಜಾರಿಗೊಳಿಸಿದೆ.
