ಭೀಕರ ಅಪಘಾತದಲ್ಲಿ ಮೂವರು ರೈತ ಮಹಿಳೆಯರು ಸಾವು

0
accident

ಗದಗ: ಜಿಲ್ಲೆಯ ಜಿಗಲೂರು ಕ್ರಾಸ್ ಬಳಿ ಗುರುವಾರ ಪ್ರಯಾಣಿಕ ವಾಹನ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ರೈತ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮೃತರನ್ನು ಗಜೇಂದ್ರಗಡದ ಶಿವಾಜಿಪೇಟೆ ನಿವಾಸಿಗಳಾದ ಅನ್ನಪೂರ್ಣ (56), ಸಂಗೀತಾ ಹೊಸಮಣಿ (48) ಮತ್ತು ಮರಿಯಮ್ಮ ಹುನಗುಂದ (55) ಎಂದು ಗುರುತಿಸಲಾಗಿದೆ. ಇವರು ರೋಣ ತಾಲ್ಲೂಕಿಗೆ ನೆಲಗಡಲೆ ಕೊಯ್ಲು ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಜೇಂದ್ರಗಡದ ಶಿವಾಜಿ ನಗರ ಪ್ರದೇಶದ ದಿನಗೂಲಿ ಕಾರ್ಮಿಕರು ಪ್ರಯಾಣಿಕ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ವಾಹನ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಐಎಂಎಸ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಆರು ಮಂದಿಗೆ ಕೈ–ಕಾಲುಗಳಲ್ಲಿ ಮುರಿತಗಳಾಗಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *