ಬೆಂಗಳೂರು ಸಿಂಹಿಣಿಯರಿಗೆ ಒಲಿದ ಡಬ್ಲ್ಯುಪಿಎಲ್ ಚಾಂಪಿಯನ್ ಪಟ್ಟ

0
WPL 2026- RCB champions (5)

ವಡೋದರಾ: ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ 2026ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕೊನೆಯ ಓವರ್‌ನಲ್ಲಿ ರೋಚಕ ಜಯ ಸಾಧಿಸುವ ಮೂಲಕ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ನಾಲ್ಕನೇ ಬಾರಿ ಫೈನಲ್‌ನಲ್ಲಿ ಸೋಲು ಕಂಡು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 203 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿ, ಡಬ್ಲ್ಯುಪಿಎಲ್ ಫೈನಲ್ ಇತಿಹಾಸದಲ್ಲೇ ಅತಿದೊಡ್ಡ ಮೊತ್ತವನ್ನು ಬೆನ್ನಟ್ಟಿದ ತಂಡ ಎಂಬ ದಾಖಲೆ ಬರೆದಿತು.

ಡೆಲ್ಲಿ ಪರ ಲಿಜಿಲ್ಲೆ ಲೀ ಮತ್ತು ಶೆಫಾಲಿ ವರ್ಮಾ ಮೊದಲ ವಿಕೆಟ್‌ಗೆ 49 ರನ್‌ಗಳ ಜೊತೆಯಾಟ ನೀಡಿದರು. ಶೆಫಾಲಿ ಔಟಾದ ಬಳಿಕ ನಾಯಕಿ ಜೆಮಿಮಾ ರಾಡ್ರಿಗಸ್ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಲಿಜಿಲ್ಲೆ ಲೀ 37 ರನ್‌ಗಳಿಗೆ ವಿಕೆಟ್ ಒಪ್ಪಿಸಿದರೂ, ನಾಲ್ಕನೇ ಕ್ರಮಾಂಕದಲ್ಲಿ ಬಂದ ಲಾರಾ ವುಲ್ಫಾರ್ಟ್ ಜೆಮಿಮಾಗೆ ಉತ್ತಮ ಸಾಥ್ ನೀಡಿದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ಜೆಮಿಮಾ 37 ಎಸೆತಗಳಲ್ಲಿ 57 ರನ್‌ಗಳ ಅರ್ಧಶತಕ ಬಾರಿಸಿದರೆ, ವುಲ್ಫಾರ್ಟ್ 44 ರನ್ ಸೇರಿಸಿದರು. ಕೊನೆಯಲ್ಲಿ ಶೆನೆಲ್ಲೆ ಹೆನ್ರಿ 15 ಎಸೆತಗಳಲ್ಲಿ ಅಜೇಯ 35 ರನ್‌ಗಳ ನೆರವಿನಿಂದ ಡೆಲ್ಲಿ 203 ರನ್‌ಗಳ ಬೃಹತ್ ಮೊತ್ತ ತಲುಪಿತು.

204 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಗ್ರೇಸ್ ಹ್ಯಾರಿಸ್ (9) ಬೇಗನೆ ಔಟಾದರೂ, ನಾಯಕಿ ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವಾಲ್ ಡೆಲ್ಲಿ ಬೌಲರ್‌ಗಳನ್ನು ದಿಕ್ಕುತಪ್ಪಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ ಕೇವಲ 58 ಎಸೆತಗಳಲ್ಲಿ ಶತಕದ ಜೊತೆಯಾಟ ಪೂರ್ಣಗೊಳಿಸಿತು. ಮಂಧಾನ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, ಒಟ್ಟು 87 ರನ್ ಗಳಿಸಿದರು. ವಾಲ್ 79 ರನ್ ಗಳಿಸಿ ಮಿನ್ನು ಮಣಿ ಬೌಲಿಂಗ್‌ನಲ್ಲಿ ಔಟಾದರು. ಇಬ್ಬರೂ ಸೇರಿ 165 ರನ್‌ಗಳ ಭಾರೀ ಜೊತೆಯಾಟ ನೀಡಿದರು.

ಕೊನೆಯ ಹಂತದಲ್ಲಿ ಡೆಲ್ಲಿ ತಂಡ ಒತ್ತಡ ಸೃಷ್ಟಿಸಿದರೂ, 19ನೇ ಓವರ್‌ನಲ್ಲಿ ಮಂಧಾನ ಔಟಾದ ಬಳಿಕವೂ ಆರ್‌ಸಿಬಿ ಸಂಯಮ ಕಳೆದುಕೊಳ್ಳಲಿಲ್ಲ. ಕೊನೆಯ ಓವರ್‌ನಲ್ಲಿ 10 ರನ್ ಅಗತ್ಯವಿದ್ದಾಗ ರಾಧಾ ಯಾದವ್ ಎರಡು ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್‌ಸಿಬಿ ಮಹಿಳಾ ಕ್ರಿಕೆಟ್‌ನಲ್ಲಿ ತನ್ನ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿತು.

Leave a Reply

Your email address will not be published. Required fields are marked *