ಬೆಂಗಳೂರಲ್ಲಿ ಆರ್ ಟಿಒ ಕಾರ್ಯಾಚರಣೆ ; ಅರ್ಜುನ್ ಜನ್ಯ ಜಾಗ್ವಾರ್ ಕಾರು ಜಪ್ತಿ
ಬೆಂಗಳೂರಿನಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದ ಆರ್ ಟಿಒ ಮತ್ತು ಸಾರಿಗೆ ಅಧಿಕಾರಿಗಳು, ಮ್ಯಾಕ್ಸಿ ಕ್ಯಾಬ್ ಮತ್ತು ಟಿಟಿ ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಆರ್ ಟಿಓ ಅಧಿಕಾರಿಗಳು ಮತ್ತು ಸಾರಿಗೆ ಅಧಿಕಾರಿಗಳು ಜಂಟಿಯಾಗಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಂಗಳವಾರ ಹಠಾತ್ ಕಾರ್ಯಾಚರಣೆ ನಡೆಸಿ, 600 ಕ್ಕೂ ಹೆಚ್ಚು ವಾಹನಗಳಿಗೆ ದಂಡ ವಿಧಿಸಿದರು.
ಬಿಎಂಟಿಸಿ ಓಡಾಡುವ ಸ್ಥಳಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ಕೆಲವು ಟಿಟಿ ಚಾಲಕರು ಪ್ರಯಾಣಿಕರು ಹತ್ತಿಸಿಕೊಳ್ಳುತ್ತಿದ್ದರು. ಇದರಿಂದ ಸಾರಿಗೆ ಇಲಾಖೆಗೆ ನಷ್ಟವುಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಆರ್ ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣ ಗಮನದಲ್ಲಿಟ್ಟುಕೊಂಡು ಟಿಟಿ ವಾಹನಗಳ ಕಿಟಿಕಿ, ಗಾಜುಗಳಿಗೆ ಅಳವಡಿಸಲಾಗಿದ್ದ ಸ್ಕ್ರೀನ್ ಗಳನ್ನು ತೆರವುಗೊಳಿಸಿದರು.
ತಪಾಸಣೆ ಮಾಡುವ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಸೇರಿದ ಜಾಗ್ವಾರ್ ಕಾರನ್ನು ಜಪ್ತಿ ಮಾಡಲಾಯಿತು. ಆರು ತಿಂಗಳ ಹಿಂದೆ ಕಾರನ್ನು ಖರೀದಿಸಿ, ನೋಂದಣಿ ಮಾಡಿಸದೇ ಚಲಾಯಿಸುತ್ತಿದ್ದರು. ಹೀಗಾಗಿ ಗಾಡಿಯನ್ನು ಜಪ್ತಿ ಮಾಡಿ 10 ಲಕ್ಷ 25 ಸಾವಿರ ದಂಡವನ್ನು ಪಾವತಿ ಮಾಡಲಾಯಿತು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದರು.