ಬಿಜೆಪಿ-ಜೆಡಿಎಸ್‌ನಿಂದ ಬಡಜನರ ವಿರುದ್ದ ಪಾದಯಾತ್ರೆ?
ಮಂಡ್ಯ: ಬಿಜೆಪಿ, ಜೆಡಿಎಸ್ ಪಾದಯಾತ್ರೆ ಮಾಡುತ್ತಿರುವುದು ನನ್ನ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧವಲ್ಲ. ಈ ರಾಜ್ಯದ ಬಡಜನರ ವಿರುದ್ದ ಪಾದಯಾತ್ರೆ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಡ್ಯದಲ್ಲಿ ಮಂಗಳವಾರ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿ, ಬಿಜೆಪಿ-ಜೆಡಿಎಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. “ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಧಮ್ ಇಲ್ಲ. ಹೀಗಾಗಿ ಮಾಧ್ಯಮಗಳಲ್ಲಿ ಕೇವಲ ನನ್ನ ಮತ್ತು ಕುಮಾರಸ್ವಾಮಿ ಅವರ ವಿಚಾರವನ್ನೇ ಮಾಧ್ಯಮಗಳು ತೆಗೆದುಕೊಳ್ಳುತ್ತಿವೆ” ಪಾದಯಾತ್ರೆ ಬಗ್ಗೆ ಲೇವಡಿ ಮಾಡಿದರು.
“ಬಿಜೆಪಿ, ಜೆಡಿಎಸ್ ಪಾದಯಾತ್ರೆ ಮಾಡುತ್ತಿರುವುದು ನನ್ನ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧವಲ್ಲ. ಈ ರಾಜ್ಯದ ಬಡಜನರ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ. ಈ ರಾಜ್ಯದ ಜನ ಕಾಂಗ್ರೆಸ್ ಗೆ ಶೇ. 43 ರಷ್ಟು ಮತ ನೀಡಿ 136 ಸ್ಥಾನ ನೀಡಿದ್ದಾರೆ. ಮಂಡ್ಯದಲ್ಲಿ 7 ಸ್ಥಾನ ಕೊಟ್ಟಿದ್ದಾರೆ. ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇದನ್ನು ನಿಲ್ಲಿಸಲು ಸರ್ಕಾರ ಬೀಳಿಸುವ ಹುನ್ನಾರ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ ಅವರೇ ಸರ್ಕಾರ ಬೀಳಿಸುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ಅಶೋಕಣ್ಣ ನಿನ್ನ ಕೈಯಲ್ಲಿ ಧಮ್ ಇಲ್ಲ. ವಿಜಯೇಂದ್ರಣ್ಣ ಕಾಂಗ್ರೆಸ್ ಪಕ್ಷದ ಬಿಕ್ಷೆಯಿಂದ ವಿಧಾನಸಭೆಗೆ ಬಂದಿದ್ದೀಯ. ನಾಗರಾಜ್ ಗೌಡನಿಗೆ ಟಿಕೆಟ್ ನೀಡಿದ್ದರೆ ನೀನು ಗೆಲ್ಲುತ್ತಿರಲಿಲ್ಲ. ಇದನ್ನು ಗಮನದಲ್ಲಿಟ್ಟುಕೋ” ಎಂದು ಡಿಕೆಶಿ ಹೇಳಿದರು.
“ವಿಜಯೇಂದ್ರ ನನ್ನನ್ನು ಭ್ರಷ್ಟಾಚಾರದ ಪಿತಾಮಹ ಎನ್ನುತ್ತೀಯಲ್ಲ. ನಿಮ್ಮ ತಂದೆ ಏತಕ್ಕೆ ರಾಜಿನಾಮೆ ನೀಡಿದರು. ಲಕ್ಷ್ಮೀವಿಲಾಸ್ ಬ್ಯಾಂಕ್ ನಲ್ಲಿ ದುಬೈಯಲ್ಲಿ ಖಾತೆ ತೆರೆದು ಕೋಟ್ಯಂತರ ರೂಪಾಯಿ ವರ್ಗಾವಣೆಯಾಯಿತಲ್ಲ ಇನ್ನೂ ಏಕೆ ನಿಮ್ಮ ಸರ್ಕಾರ ಇದರ ಬಗ್ಗೆ ತನಿಖೆ ಮಾಡಿಸಿಲ್ಲ. ನಿನ್ನಿಂದಾಗಿ ನಿಮ್ಮ ತಂದೆಯಿಂದ ಏಕೆ ರಾಜಿನಾಮೆ ಕೊಡಿಸಿದರು. ತಂಗಿಮಕ್ಕಳು, ನೆಂಟರು ಸೇರಿದಂತೆ ಇತರರ ಹೆಸರಿನಲ್ಲಿ ಅಕ್ರಮ ನಡೆಯಿತಲ್ಲ ಅದರ ಬಗ್ಗೆ ಬಿಚ್ಚಿಡಲೇ? ಈ ವಿಚಾರಗಳೆಲ್ಲ ವಿಧಾನಸಭೆಯಲ್ಲಿ ಚರ್ಚೆಯಾಗಿ ದಾಖಲೆಗೆ ಹೋಗಬೇಕು. ಸರಿಯಾದ ಸಂದರ್ಭದಲ್ಲಿ ಇದರ ಬಗ್ಗೆ ಮಾತನಾಡುತ್ತೇನೆ” ಎಂದರು.
“ಬಿಜೆಪಿ, ಜೆಡಿಎಸ್ ಪಾದಯಾತ್ರೆಯು ಪಾಪ ವಿಮೋಚನೆಯ ಯಾತ್ರೆ. ನೀವು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೀರಿ. ಕುಮಾರಸ್ವಾಮಿ ಅವರೇ ನಿಮ್ಮ ಸಹೋದರರ ಆಸ್ತಿಪಟ್ಟಿ ಬಿಚ್ಚಿಡಿ ಎಂದರೂ ಬಿಚ್ಚಿಡುತ್ತಿಲ್ಲ. ನೀವು ಎಲ್ಲಿಗೆ ಬೇಕಾದರೂ ಚರ್ಚೆಗೆ ಕರೆಯಿರಿ ನಾನು ಸಿದ್ದನಿದ್ದೇನೆ” ಎಂದು ಹೇಳಿದರು.