ಬಿಜೆಪಿ ಜತೆ ಕೈ ಜೋಡಿಸದ ಪಕ್ಷ ಯಾವುದಿದೆ? ಮೈತ್ರಿ ವಿಚಾರದ ಬಗ್ಗೆ ದೇವೇಗೌಡರ ಪ್ರತಿಕ್ರಿಯೆ

ಬೆಂಗಳೂರು: ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಅನೇಕರು ಬಿಜೆಪಿ ಜತೆ ಕೈ ಜೋಡಿಸಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ ಅಲ್ಲವೇ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಆಗುವ ಸಾಧ್ಯತೆ ಇದೆಯೇ? ಹಾಗೂ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧ ಸಮಾನಮನಸ್ಕ ಪಕ್ಷಗಳು ಒಂದಾದರೆ, ಆ ಒಕ್ಕೂಟದ ನೇತೃತ್ವ ವಹಿಸುವಿರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ವಿರುದ್ಧ ಒಕ್ಕೂಟ ರಚನೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಯತ್ನ ನಡೆಸುತ್ತಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಬಿಜೆಪಿ ಜತೆ ಸೇರಿ ರಾಜಕೀಯ ಮಾಡದೆ ಇರುವ ಯವುದರೂ ಪಕ್ಷವನ್ನು ತೋರಿಸಿ ಎಂದು ಮರು ಪ್ರಶ್ನೆ ಹಾಕಿದರು, ಮೊದಲು ನನ್ನ ಪ್ರಶ್ನೆಗೆ ಉತ್ತರ ನೀಡಿ. ಆಮೇಲೆ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದರು.
ಅನೇಕ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಬಿಜೆಪಿ ಪಕ್ಷದ ಜತೆಗೆ ಕೈಜೋಡಿಸಿವೆ. ಕಾಂಗ್ರೆಸ್ ಪಕ್ಷದ ಅನೇಕರು ನಾಯಕರು ಬಿಜೆಪಿ ಜತೆ ಶಾಮೀಲಾಗಿದ್ದಾರೆ. ಕರ್ನಾಟಕದಲ್ಲಿಯೂ ಅದನ್ನು ಕಾಣಬಹುದು. ಇದರಲ್ಲಿ ಮುಚ್ಚುಮರೆ ಏನಿದೆ? ಎಂದು ಅವರು ಖಾರಬಾಗಿ ಹೇಳಿದರು.