ಬರಗಾಲ ಪರಿಹಾರಕ್ಕಾಗಿ ಯಾವ ಜಿಲ್ಲೆಗೂ ಹಣಕೊಟ್ಟಿಲ್ಲ: ಈಶ್ವರಪ್ಪ ಆರೋಪ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರಪೀಡಿತ ಪ್ರದೇಶಗಳಿಗೆ ಹಣ ಬಿಡುಗಡೆ ಮಾಡಿದ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ನಾನು ಅನೇಕ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಒಂದು ಜಿಲ್ಲೆಗೂ ಒಂದು ರೂಪಾಯಿ ಹೋಗಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಇಂದು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 300 ಕೋಟಿಗೂ ಹೆಚ್ಚು ಹಣ ನೀಡಿದ್ದಾಗಿ ಹೇಳಿದ್ದಾರೆ. ಒಬ್ಬ ರೈತರಿಗೂ ಒಂದು ರೂಪಾಯಿ ನೀಡಿಲ್ಲ. ನಾವು ಜಿಲ್ಲೆಗಳ ರೈತರನ್ನು ಮಾತನಾಡಿಸಿದ್ದೇವೆ. ಬೆಳೆ ಮಾಹಿತಿ, ಭೇಟಿ ನೀಡಿದ ಮುಖಂಡರ ಬಗ್ಗೆ ಕೇಳಿದ್ದೇವೆ. ಒಬ್ಬರೂ ಬಂದಿಲ್ಲ ಎಂದಿದ್ದಾರೆ. ಭೀಕರ ಬರಗಾಲದಿಂದ ಜನರು ಗುಳೆ ಹೋಗುತ್ತಿದ್ದಾರೆ ಎಂದರು.
ಬರದ ಕುರಿತು ಸಿಎಂ ಸುಳ್ಳು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ‘ಬರುತ್ತೆ ಸರ್, ಬರುತ್ತೆ ಸರ್’ ಎನ್ನುತ್ತಾರೆ. ಶಾಸಕರ ನಿಧಿ 50 ಲಕ್ಷ ಬಿಡುಗಡೆ ಮಾಡಿದ್ದಾಗಿ ತಿಳಿಸಿ ತಿಂಗಳಾಗಿದೆ. ಆದರೆ, ಶಾಸಕರಿಗೂ ದುಡ್ಡು ಹೋಗಿಲ್ಲ. ಬರ ಪರಿಹಾರ ಹಣದ ಲೆಟರ್ ಹೋದರೆ ದುಡ್ಡು ಹೋದಂತಾಗುತ್ತದೆಯೇ ಎಂದು ಪ್ರಶ್ನಿಸಿದರು.

ರೈತರಿಗೆ ದ್ರೋಹ ಮಾಡುವ ಮೊದಲನೇ ಮುಖ್ಯಮಂತ್ರಿ ಇವರು ಎಂದು ಟೀಕಿಸಿದ ಅವರು, ತಕ್ಷಣ ಹಣ ಬಿಡುಗಡೆ ಮಾಡಿ; ಅದು ರೈತರಿಗೆ ತಲುಪುವಂತೆ ನೋಡಿಕೊಳ್ಳಿ ಎಂದು ಆಗ್ರಹಿಸಿದರು. ಶಾಸಕರಿಗೂ ಹಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು. ಸೋಮಶೇಖರ್ ಅವರು ವಿಷ ಕುಡಿದಿದ್ದಾರಾ? ಇಡೀ ರಾಜ್ಯದ ಜನ ಬಿಜೆಪಿಯನ್ನು ನೋಡಿದ್ದಾರೆ. ಬಸವರಾಜ ಬೊಮ್ಮಾಯಿ ಬಂದು ಸಿಎಂ ಆದರು. ಅವರಿಗೆ ವಿಷ ಕೊಟ್ಟಿದ್ದೇವಾ? 17 ಜನ ಬಂದಿದ್ದರು. ಅವರು ಯಾವ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎನ್ನುತ್ತಾರೆ. ಸೋಮಶೇಖರ್ ಅವರು ಪಕ್ಷದಲ್ಲಿ ನಿಷ್ಠೆಯಿಂದ ಇದ್ದು, ಈ ಪಕ್ಷದ ಕುರಿತು ನಂಬಿಕೆ ಇದ್ದರೆ ಇರಲಿ; ನನಗಿಷ್ಟವಿಲ್ಲ, ಅಧಿಕಾರ ಇದ್ದಾಗ ಮಾತ್ರ ಬರ್ತೀನಿ. ಇಲ್ಲಾಂದರೆ ಹೋಗ್ತೀನಿ ಎಂದರೆ ಅವರ ಇಷ್ಟ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟರು.

ಸೋಮಶೇಖರ್ ಅವರನ್ನು ಪಾರ್ಟಿ ಬಿಟ್ಟು ಹೋಗು ಎಂದಿಲ್ಲ. ನಾನ್ಯಾರು ಹಾಗೆ ಹೇಳಲು ಎಂದು ಕೇಳಿದ ಅವರು, ಅನೇಕರು ಜಾಮೂನ್ ತಿಂದಿದ್ದಾರೆ. ವಿಷ ಕುಡಿದ ಒಬ್ಬರಿದ್ದಾರಾ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟರು. ಜಾಮೂನ್ ತಿಂದು ಸಚಿವರಾದರು; ನಾವೂ ಸಚಿವರಾದೆವು. ಸರಕಾರವೂ ಬಂತು. ಈಗ ಸರಕಾರ ಬಂದಿದ್ದರೆ ಹಾಗೆ ಹೇಳುತ್ತಿದ್ದರೇ ಎಂದು ಕೇಳಿದರು. ಬಿಜೆಪಿಯಲ್ಲಿ ಕೋಟ್ಯಂತರ ಕಾರ್ಯಕರ್ತರಿದ್ದಾರೆ. ಬಿಜೆಪಿಯಲ್ಲಿ ಶಾಸಕರಾಗಿ ಇದ್ದು ಈ ರೀತಿ ಮಾತನಾಡಬೇಡಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಬರಗಾಲ ಸಂಬಂಧ ಮಾತೆತ್ತಿದರೆ ಕೇಂದ್ರ ಸರಕಾರ ಎನ್ನಬೇಡಿ. ಹಣ ಬಿಡುಗಡೆ ಮಾಡಿ ಎಂದು ಸಿಎಂ ಅವರನ್ನು ಆಗ್ರಹಿಸಿದರು. ಡಿ.ಕೆ.ಶಿವಕುಮಾರರು ಕದ್ದು ನೀರು ಬಿಟ್ಟರಲ್ಲವೇ? ಪ್ರಧಾನಿಯವರನ್ನು ಕೇಳಿದ್ದಾರಾ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯನವರು ಸಿಎಂ ಆಗಿ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ; ಇನ್ನೂ ಒಂದಷ್ಟು ದಿನ ಸಿಎಂ ಆಗಿರಲಿ ಎಂದು ರೈತರು ಆಶೀರ್ವಾದ ಮಾಡಲು ರೈತರಿಗೆ ಪರಿಹಾರ ಕೊಡುವ ಕರ್ತವ್ಯ ನಿರ್ವಹಿಸಲಿ ಎಂದು ಆಗ್ರಹಿಸಿದರು.

ಪಕ್ಷದಲ್ಲಿ ಶಿಸ್ತು ಕ್ರಮದ ಅವಶ್ಯಕತೆ ಇಲ್ಲವೆಂದು ಹೇಳಿಲ್ಲ. ಅನೇಕ ಜನ ಬಿಜೆಪಿಗೆ ಬಂದಿದ್ದಾರೆ. ಯಾರನ್ನು ಇಟ್ಟುಕೊಳ್ಳಬೇಕು; ಯಾರನ್ನು ತೆಗೆಯಬೇಕೆಂದು ನಾವೂ ನೋಡುತ್ತಿದ್ದೇವೆ. ಒಂದೇ ಸಾರಿ ಪಾರ್ಟಿ ಖಾಲಿ ಮಾಡಲು ಕಾಂಗ್ರೆಸ್ ಅಲ್ಲ ನಮ್ಮದು. ಕಾಂಗ್ರೆಸ್ ದೇಶದಲ್ಲಿ ಎಲ್ಲಿದೆ ಎಂದು ಕೇಳಿದರು. ಈ ಸಾರಿ ಆ ಗ್ಯಾರಂಟಿ, ಈ ಗ್ಯಾರಂಟಿ ಎಂದು ಹೆಣ್ಮಕ್ಕಳಿಗೆ ಟೋಪಿ ಹಾಕಿ ಅಧಿಕಾರಕ್ಕೆ ಬಂದು ಅತಿ ಹೆಚ್ಚು ಲೂಟಿ ಹೊಡೆಯುತ್ತಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ದುಡ್ಡು ತಿನ್ನುವುದನ್ನು ಎಲ್ಲ ಸಚಿವರು, ಶಾಸಕರು ಕಣ್ಕಣ್ಣು ಬಿಟ್ಟು ನೋಡುತ್ತಿದ್ದಾರೆ. ಇಂಥವರಿಗೆ ಬಿಜೆಪಿ ಬಗ್ಗೆ ಮಾತನಾಡಲು ಏನು ಅಧಿಕಾರ ಇದೆ ಎಂದು ಪ್ರಶ್ನಿಸಿದರು. ತಲೆಹರಟೆ ಮಾತನಾಡುವವರನ್ನು ಯಾವಾಗ ಯಾರನ್ನು ತೆಗೆಯಬೇಕೋ ಗೊತ್ತಿದೆ. ಸಂದರ್ಭ ಬಂದಾಗ ಕ್ರಮ ಕೈಗೊಳ್ಳುತ್ತೇವೆ ಎಂದರು.

ಈ ಸರಕಾರ ಎಸ್‍ಸಿಎಸ್‍ಟಿಗೆ ಇಟ್ಟ 11 ಸಾವಿರ ಕೋಟಿಯನ್ನೇ ತೆಗೆದುಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ ಬಡವರ ಆಶ್ರಯ ಮನೆಗಳ ಕೆಲಸ ನಡೆದಿಲ್ಲ. ಕರ್ನಾಟಕ ರಾಜ್ಯವು ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರದ ಕೇಂದ್ರ ಎಂದು ಟೀಕಿಸಿದರು. ಇದು ನಾಚಿಕೆಗೇಡಿನ ಸರಕಾರ ಎಂದು ಆಕ್ಷೇಪಿಸಿದರು.
ವಿಧಾನಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ 4 ಜಿಲ್ಲೆಗಳ ಪಕ್ಷದ ಎಲ್ಲ ಪ್ರಮುಖರು ಚುನಾವಣಾ ತಯಾರಿ ದೃಷ್ಟಿಯಿಂದ ಸೇರಿದ್ದೇವೆ. ಬಹಳ ಚೆನ್ನಾಗಿ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.

You may have missed