ಪರಮೇಶ್ವರ್ ಗೆ ಗೃಹ, ಕೆ.ಜೆ.ಜಾರ್ಜ್ಗೆ ಬೆಂಗಳೂರು ನಗರಾಭಿವೃದ್ಧಿ..
ಹಲವು ಸುತ್ತಿನ ಕಸರತ್ತಿನ ಬಳಿಕ ವರಿಷ್ಠರ ಸೂಚನೆಯ ಮೇರೆಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
ಉಪ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿದ್ದ ಪರಮೇಶ್ವರ್ ಅವರಿಗೆ ವರಿಷ್ಠರ ಸೂಚನೆಯ ಮೇರೆಗೆ ಗೃಹ ಖಾತೆಯ ಜವಾಬ್ದಾರಿ ನೀಡಲು ತೀರ್ಮಾನಿಸಿರುವ ಸಿಎಂ, ಇಲ್ಲಿಯವರೆಗೆ ಈ ಖಾತೆಯನ್ನು ನಿರ್ವಹಿಸುತ್ತಿದ್ದ ಕೆ.ಜೆ.ಜಾರ್ಜ್ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ನೀಡಲು ಚಿಂತನೆ ನಡೆಸಿದ್ದಾರೆ. ಈ ಮೂಲಕ ಬೆಂಗಳೂರಿಗೆ ಪ್ರತ್ಯೇಕ ಸಚಿವರನ್ನು ನೇಮಿಸುವ ಬೇಡಿಕೆ ಈಡೇರಿಸಲು ಮುಂದಾಗಿದ್ದಾರೆ.
ಉಳಿದಂತೆ ತಮ್ಮ ಬಳಿಯಿದ್ದ ಖಾತೆಗಳನ್ನೆ ನೂತನ ಸಚಿವರಿಗೆ ಹಂಚಿಕೆ ಮಾಡಲು ಸಿದ್ಧತೆ ನಡೆಸಿದ್ದು, ಮನೋಹರ್ ತಹಶೀಲ್ದಾರ್ ಅವರಿಗೆ ಪೌರಾಡಳಿತ, ಎ. ಮಂಜು ಅವರಿಗೆ ಉನ್ನತ ಶಿಕ್ಷಣ ಮತ್ತು ವಿನಯ್ ಕುಲಕರ್ಣಿ ಅವರಿಗೆ ಅಬಕಾರಿ ಖಾತೆಯ ಜವಾಬ್ದಾರಿ ನೀಡುವ ಸಾಧ್ಯತೆಯಿದೆ. ಈ ಕುರಿತಂತೆ ತಮ್ಮ ಬೆಂಬಲಿಗರು ಮತ್ತು ಹಿರಿಯ ಸಚಿವರೊಂದಿಗೆ ಚರ್ಚೆ ನಡೆಸಿದ ನಂತರ, ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ.