ನಿವೃತ್ತಿ ಆಗುತ್ತೇನೆ ಎಂದವರು ಮುಖ್ಯಮಂತ್ರಿ ಆಗಿದ್ದಾರೆ; ಸಿದ್ದರಾಮಯ್ಯ ಬಗ್ಗೆ ಅಶ್ವತ್ಥನಾರಾಯಣ ವ್ಯಂಗ್ಯ

0

ಬೆಂಗಳೂರು: ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ತಮ್ಮ ಆಶ್ವಾಸನೆ ಈಡೇರಿಸದೆ ಮಾತಿಗೆ ತಪ್ಪಿದೆ. ಇದರ ವಿರುದ್ಧ ‘ಮೋಸ ನಿಲ್ಲಿಸಿ, ಗ್ಯಾರಂಟಿ ಜಾರಿಗೊಳಿಸಿ’ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಅನುಷ್ಠಾನದ ವಿಚಾರದಲ್ಲಿ ಭಂಡತನ ತೋರುತ್ತಿದೆ. ಕಂಡಿಷನ್ ಇಲ್ಲದೆ ಗ್ಯಾರಂಟಿಗಳನ್ನು ಜಾರಿ ಮಾಡಲು ಆಗ್ರಹಿಸಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
ಶೇ 50ಕ್ಕಿಂತ ಹೆಚ್ಚು ವಿದ್ಯುತ್ ದರ ಏರಿಸಿದ್ದಾರೆ. ಇದರಿಂದ ಬೆಲೆ ಏರಿಕೆ ಆಗುತ್ತಿದೆ ಎಂದರಲ್ಲದೆ, ಬೆಲೆ ಏರಿಕೆಯನ್ನು ಇಳಿಸಲು ಆಗ್ರಹಿಸಿದರು. ಈ ಸರಕಾರ ಬೆಲೆ ಏರಿಕೆ, ಭ್ರಷ್ಟಾಚಾರಕ್ಕೆ ಸಾಕ್ಷಿಯಾಗುತ್ತಿದೆ ಎಂದು ಆರೋಪಿಸಿದರು. ಕೈಗಾರಿಕೆಗಳು, ಜನಸಾಮಾನ್ಯರು ವಿದ್ಯುತ್ ದರ ಏರಿಕೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.

ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಾಕ್ಷಣ ಅವುಗಳ ಅನುಷ್ಠಾನ ಮಾಡುವುದಾಗಿ ತಿಳಿಸಿತ್ತು. ಆದರೆ ಅದನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಆಗ್ರಹಿಸಿ ಇದೇ 4ರಂದು ಹೋರಾಟ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸದನದ ಹೊರಗೆ ಪಕ್ಷದ ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಸದನದ ಒಳಗೆ ಶಾಸಕರ ಹೋರಾಟ ನಡೆಯಲಿದೆ ಎಂದರು. 10 ಕೆಜಿ ಅಕ್ಕಿ ಈಗ 5 ಕೆಜಿಗೆ ಬಂದಿದೆ. ಈಗ 5 ಕೆಜಿ ಕೊಡಲು ಬಹಳ ಕಷ್ಟಪಡುತ್ತಿದ್ದಾರೆ ಎಂದು ಟೀಕಿಸಿದರು. ಮಾತಿನಂತೆ 10 ಕೆಜಿ ಅಕ್ಕಿ ಕೊಡಿ ಎಂದು ಆಗ್ರಹಿಸಿದರು.

200 ಯೂನಿಟ್ ಉಚಿತ ವಿದ್ಯುತ್ ಎಂದಿದ್ದರು. ಈಗ 200 ಯೂನಿಟ್ ಮಾಯವಾಗಿ 10 ತಿಂಗಳ ಸರಾಸರಿ ಮಾಡಿ ಹೆಚ್ಚುವರಿ ಶೇ 10 ಕರೆಂಟ್ ಕೊಡುವ ಮಾತನಾಡುತ್ತಿದ್ದಾರೆ. ಕಂಡಿಷನ್ ಇಲ್ಲದೆ 200 ಯೂನಿಟ್ ವಿದ್ಯುತ್ ಕೊಡುವಂತೆ ಒತ್ತಾಯಿಸಿದರು. ಎಲ್ಲರೂ ಇಲೆಕ್ಟ್ರಿಕ್ ಸ್ಟವ್ ಕೊಂಡುಕೊಂಡು ಕಾಯುತ್ತಿದ್ದಾರೆ ಎಂದು ಗಮನ ಸೆಳೆದರು. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಗೆ 2 ಸಾವಿರ ರೂ. ಕೊಡುವುದಾಗಿ ಪ್ರಿಯಾಂಕ ಗಾಂಧಿ ಅವರೇ ಘೋಷಿಸಿದ್ದರು. ಈಗ ಮನೆಯೊಡತಿಗೆ ಮಾತ್ರ ಎನ್ನುವ ಮೂಲಕ ಮನೆಯಲ್ಲಿ ಜಗಳ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮಹಿಳೆಗೂ ಹಣ ಕೊಡಿ ಎಂದು ಒತ್ತಾಯಿಸಿದರು.  2022-23ರಲ್ಲಿ ಪಾಸಾಗಿ ಉದ್ಯೋಗ ಸಿಗದವರು ಮಾತ್ರ ನಿರುದ್ಯೋಗಿಗಳೇ? ಹಿಂದಿನ ನಿರುದ್ಯೋಗಿಗಳನ್ನು ಪರಿಗಣಿಸಬೇಕಲ್ಲವೇ ಎಂದು ಕೇಳಿದ ಅವರು, ಚುನಾವಣೆ ವೇಳೆ ಇದೇ ಮಾತನ್ನು ಹೇಳಿದ್ದೀರಾ ಎಂದು ಪ್ರಶ್ನಿಸಿದರು. ಪ್ರತಿಯೊಬ್ಬ ಪದವಿ ಪಡೆದು ನಿರುದ್ಯೋಗಿ ಆಗಿರುವವರಿಗೆ 3 ಸಾವಿರ ಮತ್ತು ಡಿಪ್ಲೊಮಾ ನಿರುದ್ಯೋಗಿಗಳಿಗೆ 1,500 ರೂ. ಭತ್ಯೆ ಕೊಡಬೇಕು ಎಂದು ಅವರು ತಿಳಿಸಿದರು. ಶಕ್ತಿ ಯೋಜನೆಯಡಿ ಸಾಕಷ್ಟು ಬಸ್ಸುಗಳಿಲ್ಲ. ಮೂರು ಮತ್ತೊಂದು ಬಸ್‍ಗಳಿವೆ. ಹಲವಷ್ಟು ರಿಪೇರಿಗೆ ಬಂದಿವೆ. ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ಅನಾನುಕೂಲತೆ ಉಂಟಾಗಿದೆ. ಬೇಕಾಬಿಟ್ಟಿ ಘೋಷಣೆ ಮಾಡಿದ್ದಾರೆ. ಅವರಾಗಲೀ, ಅವರ ಕುಟುಂಬದವರಾಗಲೀ ಈ ಬಸ್‍ಗಳಲ್ಲಿ ಓಡಾಡಬೇಕಿಲ್ಲವಲ್ಲವೇ ಎಂದು ಕೇಳಿದರು. ಜನರಿಗೆ ನರಕಯಾತನೆ ಆಗುತ್ತಿದೆ ಎಂದು ವಿವರಿಸಿದರು.

ವಿಪಕ್ಷ ನಾಯಕನ ನೇಮಕಾತಿ ಶೀಘ್ರವೇ ಆಗಲಿದೆ ಎಂದ ಅವರು, ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಗೆ ಹೇಳುವ ನೈತಿಕತೆ ಇಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು. ನಮ್ಮದು ಕುಟುಂಬದ ಪಕ್ಷವಲ್ಲ. ಇದು ಜನರ ಪಕ್ಷ. ಜನರ ಭಾವನೆ, ಮಿಡಿತಗಳನ್ನು ಗಮನಿಸಿ ನಮ್ಮ ಪಕ್ಷ ಕೆಲಸ ಮಾಡುತ್ತಿದೆ. ಅವರಲ್ಲಿ ನಿವೃತ್ತಿ ಆಗುತ್ತೇನೆ ಎಂದವರು ಮುಖ್ಯಮಂತ್ರಿ ಆಗಿದ್ದಾರೆ ಎಂದು ವ್ಯಂಗ್ಯವಾಗಿ ತಿಳಿಸಿದರು.  ಅವರಲ್ಲಿ ಎಷ್ಟು ಗುಂಪಿದೆ ನೋಡಿ. ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಭ್ರಷ್ಟಾಚಾರ, ಟ್ರಾನ್ಸ್‍ಫರ್ ದಂಧೆ ಶುರುವಾಗಿದೆ ನೋಡಿ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ವಿಪಕ್ಷ ನಾಯಕನ ಸ್ಥಾನಕ್ಕೆ ಯಾರೂ ಅರ್ಜಿ ಹಾಕುತ್ತಿಲ್ಲ; ಯಾಕೆಂದರೆ ಇದು ಕಾಂಗ್ರೆಸ್ ಪಕ್ಷವಲ್ಲ. ಅಂಥ ಸಂಸ್ಕøತಿ ನಮ್ಮದಲ್ಲ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Leave a Reply

Your email address will not be published. Required fields are marked *

You may have missed