ದೇವಾಲಯಗಳಿಗೆ ಎಲ್ಲರಿಗೂ ಮುಕ್ತ ಪ್ರವೇಶಾವಕಾಶ; ‘ಮಸೀದಿಗೂ ಅನ್ವಯವಾಗುತ್ತಾ?’ ಎಂದು ಸರ್ಕಾರಕ್ಕೆ ಪ್ರಶ್ನೆಗಳ ಸರಮಾಲೆ

0

ಬೆಂಗಳೂರು: ರಾಜ್ಯದ ಮುಜರಾಯಿ  ದೇವಸ್ಥಾನಗಳಲ್ಲಿ ಇನ್ನು ಮುಂದೆ ಎಲ್ಲರಿಗೂ ಮುಕ್ತ ಪ್ರವೇಶಾವಕಾಶ ಇರಲಿದೆ. ಈ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಔರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಆಡಳಿತ ಪಕ್ಷ ಕಾಂಗ್ರೆಸ್, ಮುಜರಾಯಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಇನ್ಮುಂದೆ ಜಾತಿ ಹಾಗೂ ಲಿಂಗಭೇಧವಿಲ್ಲದೆ ಸರ್ವರಿಗೂ ಮುಕ್ತ ಪ್ರವೇಶ ಎಂಬ ಫಲಕವನ್ನು ಕಡ್ಡಾಯಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆಂದು ಹೇಳಿದೆ. .

ಯಾವುದೇ ದೇವಸ್ಥಾನಗಳಲ್ಲಿ ದಲಿತರು, ಸ್ತ್ರೀಯರು ಎಂಬ ತಾರತಮ್ಯ ಮಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ಧಾರ್ಮಿಕ ಸ್ವತಂತ್ರದ ವಾತಾವರಣ ನಿರ್ಮಿಸುವುದೇ ನಿಜವಾದ ಧರ್ಮರಕ್ಷಣೆ ಎಂದು ಕಾಂಗ್ರೆಸ್ ಸರ್ಕಾರ ನಂಬಿದೆ ಎಂದು ಹೇಳಿಕೊಂಡಿದೆ. .

ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಸೀದಿಗಳಿಗೆ ಈ ನಿಯಮ ಅನ್ವಯ ಇಲ್ವಾ? ಎಂಬ ಪ್ರಶ್ನೆಯನ್ನು ಕೆಲವರು ಸರ್ಕಾರದ ಮುಂದಿಟ್ಟಿದ್ದಾರೆ. ‘ನಾವು ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ. ಇದು ಮಸೀದಿಗಳಿಗೂ ಅನ್ವಯಿಸುತ್ತ?’ ಎಂಬ ಪ್ರಶ್ನೆ ಕೂಡಾ ಪ್ರತಿಧ್ವನಿಸಿದೆ. ಮಜ್ಜಿದ್ ಮತ್ತು ದರ್ಗಾಗಳಲ್ಲಿ ಹೆಣ್ಣು ಮಕ್ಕಳಿಗೆ ಬರಲು ಅವಕಾಶ ನೀಡಿ “ಸಮಾನತೆ” ಇರಲಿ ಎಂಬ ಆಗ್ರಹವೂ ಕೇಳಿಬಂದಿದೆ.

ಇದೇ ವೇಳೆ, ದೇವಸ್ಥಾನಗಳಲ್ಲಿರುವ ಕಾಣಿಕೆ ಹುಂಡಿಗಳನ್ನು ತೆಗೆಯಿರಿ ಎಂಬ ಸಲಹೆಯೂ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಎಲ್ಲ ಧಾರ್ಮಿಕ ಸಂಸ್ಥೆಗಳನ್ನೂ ಸರ್ಕಾರದ ತೆಕ್ಕೆಗೆ ತೆಗೆದುಕೊಳ್ಳಿ ಎಂದೂ ಆಗ್ರಹಿಸಿದ್ದಾರೆ.

ಇದೇ ವೇಳೆ, ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರೂ ಟ್ವೀಟ್ ಮಾಡಿ ಹೊಸ ನಿಯಮದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ನೀಡುವ ಜೊತೆ ಜೊತೆಗೆ ಅಸಲಿ ಹಿಂದುತ್ವಕ್ಕೆ ಶಕ್ತಿ ತುಂಬಿದೆ. ಎಲ್ಲಾ ಹಿಂದೂ ದೇಗುಲಗಳು, ಪುಣ್ಯಕ್ಷೇತ್ರಗಳು ತುಂಬಿ ತುಳುಕುತ್ತಿವೆ. ನಮ್ಮ ದೇವರ ಪೂಜಿಸಿ, ಪ್ರೀತಿಸುವುದು, ಇತರ ಧರ್ಮೀಯರನ್ನು ಗೌರವಿಸುವವನೇ ನಿಜವಾದ ಹಿಂದೂ. ಇದು ಈಗ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿದೆ. ನಿಜ ಹಿಂದೂಗಳ ರಕ್ಷಣೆ, ಅಭಿವೃದ್ಧಿಗೆ ಕಾಂಗ್ರೆಸ್ ಸದಾ ಬದ್ಧ’ ಎಂದವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed