ದೆಹಲಿ ಕೆಂಪುಕೋಟೆ ಸ್ಫೋಟ ಪ್ರಕರಣ : NIA ಯಿಂದ ಮತ್ತಿಬ್ಬರ ಸೆರೆ; ಬಂಧಿತರ ಸಂಖ್ಯೆ 11
ನವದೆಹಲಿ: ದೆಹಲಿಯ ಕೆಂಪು ಕೋಟೆ ಪ್ರದೇಶದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇನ್ನಿಬ್ಬರನ್ನು ಬಂಧಿಸಿದೆ. ಇದರಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತರನ್ನು ಜಮ್ಮು–ಕಾಶ್ಮೀರದ ಗಂಡೇರ್‌ಬಾಲ್‌ನ ಜಮೀರ್ ಅಹ್ಮದ್ ಅಹಂಗರ್ ಹಾಗೂ ಶ್ರೀನಗರದ ತುಫೈಲ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಇಬ್ಬರೂ ಸಂಚಿನಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದು, ಪ್ರಮುಖ ಆರೋಪಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪ ಎದುರಿಸುತ್ತಿದ್ದಾರೆ.
2025ರ ನವೆಂಬರ್ 10ರಂದು ಸಂಭವಿಸಿದ ಸ್ಫೋಟದಲ್ಲಿ 11 ಮಂದಿ ಮೃತಪಟ್ಟಿದ್ದರು; ಹಲವರು ಗಾಯಗೊಂಡಿದ್ದರು. ಪ್ರಮುಖ ಆರೋಪಿ ಉಮರ್ ಉನ್ ನಬಿ ಸ್ಫೋಟದಲ್ಲೇ ಸಾವನ್ನಪ್ಪಿದ್ದಾನೆ ಎಂದು ಎನ್‌ಐಎ ತಿಳಿಸಿದೆ.
ತನಿಖೆಯ ಪ್ರಕಾರ, ಬಂಧಿತರು ನಿಷೇಧಿತ ಸಂಘಟನೆಯಾದ ಅನ್ಸರ್ ಘಜ್ವತ್-ಉಲ್-ಹಿಂದ್ ಸಂಘಟನೆಯ ‘ಓವರ್ ಗ್ರೌಂಡ್ ವರ್ಕರ್’ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ಸಂಗ್ರಹ–ಖರೀದಿ ಸೇರಿದಂತೆ ಇತರ ಭಯೋತ್ಪಾದನಾ ಚಟುವಟಿಕೆಗಳಲ್ಲಿಯೂ ಇವರ ಪಾತ್ರವಿದೆ ಎಂದು ಸಂಸ್ಥೆ ಹೇಳಿದೆ.
ಜಮ್ಮು–ಕಾಶ್ಮೀರ ಮತ್ತು ಹರಿಯಾಣದ ವಿವಿಧ ಪ್ರದೇಶಗಳಿಂದ ಇತರ ಒಂಬತ್ತು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ದಾಳಿಯ ಪೂರ್ಣ ಜಾಲವನ್ನು ಬಹಿರಂಗಪಡಿಸಲು ಹಾಗೂ ಸಂಚಿನಲ್ಲಿ ಭಾಗಿಯಾದ ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಮುಂದುವರೆದಿದೆ ಎಂದು ಎನ್‌ಐಎ ಸ್ಪಷ್ಟಪಡಿಸಿದೆ.
