ದಾವಣಗೆರೆ: ಸ್ಟಾಕ್ ಯಾರ್ಡ್ ಮೂಲಕ ಮರಳು ಸಂಗ್ರಹಿಸಿ ನೇರವಾಗಿ ಗ್ರಾಹಕರಿಗೆ ನೀಡಲು ಜಿಲ್ಲಾಡಳಿತ ಸಿದ್ಧತೆ
ದಾವಣಗೆರೆ: ಮರಳು ಗಣಿಗಾರಿಕೆ ಸಂಬಂಧ ಹೋರಾಟ ಮಾಡುತ್ತಿದ್ದ ಮಾಜಿ ಸಚಿವ ರೇಣುಕಾಚಾರ್ಯ ಹೋರಾಟಕ್ಕೆ ಜಿಲ್ಲಾಡಳಿತ ಕೊನೆಗೂ ಮಣಿದಿದೆ. ಇದೀಗ ಜಿಲ್ಲಾಡಳಿತ ವರ್ಷದ ಬಳಿಕ ಮರಳುಗಾರಿಕೆಗೆ ಅವಕಾಶ ನೀಡಿದೆ. ಸ್ಟಾಕ್ ಯಾರ್ಡ್ ಮೂಲಕ ಮರಳು ಸಂಗ್ರಹಿಸಿ ನೇರವಾಗಿ ಗ್ರಾಹಕರಿಗೆ ನೀಡಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೆ ಅಕ್ರಮವಾಗಿ ಮರಳು ಸಾಗಣೆ ಮಾಡಲು ಜಿಲ್ಲಾಡಳಿತವೇ ಸಹಕಾರ ನೀಡುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಜಿಲ್ಲಾಡಳಿತ ಮರಳು ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರಿಂದ ಜಿಲ್ಲೆಯಲ್ಲಿ ಮರಳು ಸಮಸ್ಯೆ ಎದುರಾಗಿತ್ತು. ಇದರಿಂದ ಕಟ್ಟಡ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು. ಹೀಗಾಗಿ ಮರಳು ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದವು.
ಇದೀಗ ಸಾರ್ವಜನಿಕರ ಹೋರಾಟಕ್ಕೆ ಮಣಿದಿರುವ ಜಿಲ್ಲಾಡಳಿತ ನಿನ್ನೆಯಿಂದ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಿದೆ. ಸರ್ಕಾರದ ನೀತಿಯಂತೆ ಸ್ಟಾಕ್ ಯಾರ್ಡ್ ಗೆ ಮರಳು ಸಂಗ್ರಹಿಸಿ ನಂತರ ಗ್ರಾಹಕರಿಗೆ ಮಾರಾಟ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಆದರೆ, ಜನರು, ಈ ಮರಳು ಪಡೆಯಲು ಇನ್ನು 20 ದಿನ ಕಾಯಬೇಕು.
ಸದ್ಯ ಹರಿಹರ ಹಾಗೂ ಹೊನ್ನಳ್ಳಿಯಲ್ಲಿ ಖಾಸಗಿ ಗುತ್ತಿಗೆದಾರಿಗೆ ಸ್ಟಾರ್ಕ್ ಯಾರ್ಡ್ ಗೆ ಮರಳು ಸಂಗ್ರಹ ಮಾಡಲು ಜಿಲ್ಲಾಡಳಿತ ಟೆಂಡರ್ ನೀಡಿದೆ. ಸ್ಟಾರ್ಕ್ ಯಾರ್ಡ್ ಮೂಲಕ ಮರಳು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅಂಜನ್ ಕುಮಾರ್ ಹೇಳಿದ್ದಾರೆ.