‘ತ್ರಿಭಾಷಾ ನೀತಿ ಹೆಸರಲ್ಲಿ ಹಿಂದಿ ಹೇರಿಕೆ’: ಕೇಂದ್ರದ ವಿರುದ್ಧ ಸ್ಟಾಲಿನ್ ಆಕ್ರೋಶ

0
M.K.Stalin

ಚೆನ್ನೈ: ತ್ರಿಭಾಷಾ ನೀತಿ ಜಾರಿಗೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದು, ಇದು “ಮರೆಮಾಚಿದ ಹಿಂದಿ ಹೇರಿಕೆ” ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಸಿಬಿಎಸ್‌ಇ ವಿರುದ್ಧ ಕಿಡಿಕಾರಿದ ಅವರು, 2026–27ರ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಿಂದ ತ್ರಿಭಾಷಾ ನೀತಿ ಜಾರಿಗೆ ತರುವ ಪ್ರಸ್ತಾವನೆ ರಾಜಕೀಯ ಪ್ರೇರಿತ ನಡೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲಿ ಪರಿಚಯಿಸಲಾದ ಈ ನೀತಿ, ದೇಶದ ಭಾಷಾ ವೈವಿಧ್ಯತೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದು ಸ್ಟಾಲಿನ್ ಆರೋಪಿಸಿದರು. “ತ್ರಿಭಾಷಾ ನೀತಿ ಎನ್ನುವುದು ವಾಸ್ತವದಲ್ಲಿ ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿಯನ್ನು ಹೇರಲು ಮಾಡಲಾಗುತ್ತಿರುವ ಪ್ರಯತ್ನ. ದಕ್ಷಿಣ ರಾಜ್ಯಗಳ ವಿದ್ಯಾರ್ಥಿಗಳಿಗೆ ಇದು ಕಡ್ಡಾಯ ಹಿಂದಿಯಷ್ಟೇ,” ಎಂದು ಅವರು ಹೇಳಿದರು.

ಹಿಂದಿ ರಾಜ್ಯಗಳ ವಿದ್ಯಾರ್ಥಿಗಳಿಗೆ ತಮಿಳು, ಕನ್ನಡ, ತೆಲುಗು, ಮಲಯಾಳಂ ಅಥವಾ ಇತರ ಭಾಷೆಗಳು ಕಡ್ಡಾಯವಿದೆಯೇ ಎಂದು ಪ್ರಶ್ನಿಸಿದ ಅವರು, ಕೇಂದ್ರದ ‘ಡಬಲ್ ಸ್ಟ್ಯಾಂಡರ್ಡ್’ಗಳನ್ನು ಟೀಕಿಸಿದರು.

ಕೇಂದ್ರೀಯ ವಿದ್ಯಾಲಯಗಳಲ್ಲಿ ತಮಿಳು ಶಿಕ್ಷಕರ ಕೊರತೆ ಹಾಗೂ ತಮಿಳು ಭಾಷೆಗೆ ಸಮರ್ಪಕ ಪ್ರಾಮುಖ್ಯತೆ ನೀಡದಿರುವುದನ್ನು ಉಲ್ಲೇಖಿಸಿದ ಸ್ಟಾಲಿನ್, “ಭಾರತೀಯ ಭಾಷೆಗಳ ಉತ್ತೇಜನದ ಬಗ್ಗೆ ಉಪನ್ಯಾಸ ನೀಡುವ ಮೊದಲು ಕೇಂದ್ರ ತನ್ನ ಕ್ರಮಗಳನ್ನು ಪರಿಶೀಲಿಸಬೇಕು” ಎಂದರು. ಈ ನೀತಿ ಜಾರಿಗೆ ಅಗತ್ಯ ಮೂಲಸೌಕರ್ಯ, ಶಿಕ್ಷಕರ ಲಭ್ಯತೆ ಮತ್ತು ಹಣಕಾಸಿನ ಯೋಜನೆಗಳ ಕೊರತೆಯೂ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಹಿಂದಿ ಮಾತನಾಡುವವರಿಗೆ ಹೆಚ್ಚುವರಿ ಅವಕಾಶ ಸಿಗುವ ಮೂಲಕ ರಾಜ್ಯಗಳ ನಡುವಿನ ಅಸಮಾನತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ ಸ್ಟಾಲಿನ್, “ಇದು ಭಾಷೆಯ ವಿಚಾರ ಮಾತ್ರವಲ್ಲ, ಸಮಾನತೆ ಮತ್ತು ಒಕ್ಕೂಟ ವ್ಯವಸ್ಥೆಯ ಪ್ರಶ್ನೆ” ಎಂದು ಹೇಳಿದರು.

ಉದಯೋನ್ಮುಖ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕಾದ ಸಮಯದಲ್ಲಿ ಹೆಚ್ಚುವರಿ ಭಾಷಾ ಭಾರ ಹೇರಿಕೆಯಾಗುತ್ತಿದೆ ಎಂದು ಟೀಕಿಸಿದ ಅವರು, ಈ ಕ್ರಮವನ್ನು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆ ಎಂದು ಪ್ರತಿಪಾದಿಸಿದರು.

Leave a Reply

Your email address will not be published. Required fields are marked *

You may have missed