ತೈಲ ಕೊರತೆ ಹಿನ್ನೆಲೆ; ತಮಿಳುನಾಡಿನಲ್ಲಿ ಇವಿ ಬಳಕೆ ಹೆಚ್ಚಿಸಲು ಕ್ರಮ

ಚೆನ್ನೈ: ವಿದ್ಯುತ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (Greater Chennai Corporation) ನಗರದಲ್ಲಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಇವಿ (ವಿದ್ಯುತ್ ವಾಹನ) ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
ನಗರಪಾಲಿಕೆ ಅಧಿಕಾರಿಗಳ ಪ್ರಕಾರ, ಅಣ್ಣಾ ನಗರ (Anna Nagar), ಟಿ. ನಗರ (T. Nagar), ನುಂಗಂಬಕ್ಕಂ (Nungambakkam), ಅಡ್ಯಾರ್ (Adyar) ಹಾಗೂ ಬೆಸೆಂಟ್ ನಗರ (Besant Nagar) ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಪ್ರತಿಯೊಂದು ಸ್ಥಳದಲ್ಲೂ ಎರಡು ಚಾರ್ಜಿಂಗ್ ಪಾಯಿಂಟ್ಗಳನ್ನು ಹೊಂದಿದ್ದು, ಹತ್ತಿರದ ಪಾರ್ಕಿಂಗ್ ವ್ಯವಸ್ಥೆಯ ಮೂಲಕ ವಾಹನ ಚಾಲಕರು ಸುಲಭವಾಗಿ ತಮ್ಮ ಇವಿ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಬಹುದು.
ಈ ಯೋಜನೆಯಿಂದ ಖಾಸಗಿ ವಾಹನ ಮಾಲೀಕರು ಮಾತ್ರವಲ್ಲದೆ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳು, ಲಾಜಿಸ್ಟಿಕ್ಸ್ ಹಾಗೂ ವಿತರಣಾ ಕ್ಷೇತ್ರದಲ್ಲಿ ಕೆಲಸ ಮಾಡುವ ಇವಿ ವಾಹನ ಚಾಲಕರಿಗೂ ಹೆಚ್ಚಿನ ಅನುಕೂಲವಾಗಲಿದೆ.
ನಗರದಲ್ಲಿ ವಿದ್ಯುತ್ ದ್ವಿಚಕ್ರ ವಾಹನಗಳು ಮತ್ತು ಕಾರುಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನನಿಬಿಡ ವಾಣಿಜ್ಯ ಹಾಗೂ ವಸತಿ ಪ್ರದೇಶಗಳಲ್ಲಿ ಸಾರ್ವಜನಿಕ ಚಾರ್ಜಿಂಗ್ ಸೌಲಭ್ಯಗಳ ಅಗತ್ಯ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಡ್ 104ರ ಕೌನ್ಸಿಲರ್ ಟಿ.ವಿ. ಶೆಮ್ಮೋಳಿ (T. V. Chemmoli) ಅವರು ಈ ಹಿಂದೆ ಕೌನ್ಸಿಲ್ ಸಭೆಯಲ್ಲಿ ನಗರಾದ್ಯಂತ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ವಿದ್ಯುತ್ ವಾಹನಗಳಿಗೆ ಬದಲಾಯಿಸಿಕೊಂಡಿರುವ ಹಲವಾರು ನಿವಾಸಿಗಳು ಚಾರ್ಜಿಂಗ್ ಸೌಲಭ್ಯಗಳನ್ನು ಪತ್ತೆಹಚ್ಚುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ನಗರ ಮೇಯರ್ ಆರ್. ಪ್ರಿಯಾ (R. Priya) ಚೆನ್ನೈ ನಗರದಲ್ಲಿ 15 ಕ್ಕೂ ಹೆಚ್ಚು ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.
ಸಾರ್ವಜನಿಕ–ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ ಜಾರಿಗೆ ತರಲಾಗುತ್ತಿರುವ ನವೀಕರಿತ ಸ್ಮಾರ್ಟ್ ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆಯೊಂದಿಗೆ ಈ ಚಾರ್ಜಿಂಗ್ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಇವಿ ಚಾರ್ಜಿಂಗ್ ವ್ಯವಸ್ಥೆಯನ್ನು ಸಂಯೋಜಿಸುವುದರಿಂದ ಸ್ಥಳಾವಕಾಶದ ಸಮರ್ಪಕ ಬಳಕೆ ಹಾಗೂ ವಾಹನ ಚಾಲಕರಿಗೆ ಸುಲಭ ಪ್ರವೇಶ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಅಂತ್ಯದೊಳಗೆ ಯೋಜನೆಯ ಕಾಮಗಾರಿಯನ್ನು ಆರಂಭಿಸುವ ನಿರೀಕ್ಷೆಯಿದ್ದು, ಸ್ವಚ್ಛ ಹಾಗೂ ಸುಸ್ಥಿರ ಸಾರಿಗೆ ವ್ಯವಸ್ಥೆಯತ್ತ ಚೆನ್ನೈ (Chennai) ನಗರದ ಮತ್ತೊಂದು ಮಹತ್ವದ ಹೆಜ್ಜೆಯಾಗಲಿದೆ.
