ತುಂಗಭದ್ರಾ ಜಲಾಶಯದ ಸಮಸ್ಯೆ ಬಗೆಹರಿದಿಲ್ಲ, ಆಲಮಟ್ಟಿ ಯೋಜನೆಗಾಗಿ ಇಲಾಖೆಗಳ ಅನುದಾನ ಕಡಿತ

0
TUNGABHADRA-DAM

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ ರೈತರಿಗೆ ಕಾಂಗ್ರೆಸ್‌ ಸರ್ಕಾರ ಪರಿಹಾರ ನೀಡಿಲ್ಲ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಉತ್ತರ ಕರ್ನಾಟಕದ ಯಾವ ಭರವಸೆಗಳು ಈಡೇರಿದೆ ಎಂದು ತಿಳಿಸಲು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ಜನರು ಗಂಜಿ ಕೇಂದ್ರದಲ್ಲಿರುತ್ತಾರೆ. ಆಗ ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಕಾಂಗ್ರೆಸ್‌ ಸರ್ಕಾರದಲ್ಲಿ, 2013-2014 ರ ಜುಲೈನಲ್ಲಿ 9 ತಿಂಗಳಾದ ನಂತರ, 2014-15 ರಲ್ಲಿ 8 ತಿಂಗಳ ನಂತರ, 2015-16 ರಲ್ಲಿ 7 ತಿಂಗಳ ನಂತರ ಪರಿಹಾರ ನೀಡಲಾಗಿದೆ. ನಮ್ಮ ಬಿಜೆಪಿ ಸರ್ಕಾರದಲ್ಲಿ 2019-20 ರ ಆಗಸ್ಟ್‌ ಪ್ರವಾಹದ ನಂತರ ಎರಡೇ ತಿಂಗಳಲ್ಲಿ ಪ್ರವಾಹ ನೀಡಲಾಗಿದೆ. 2022 ರ ಪ್ರವಾಹದಲ್ಲಿ ಎರಡು ತಿಂಗಳಲ್ಲಿ, 2021-22 ರ ಪ್ರವಾಹದಲ್ಲಿ ಎರಡು ತಿಂಗಳಲ್ಲಿ, 2023 ರ ಪ್ರವಾಹದಲ್ಲಿ ಒಂದೇ ತಿಂಗಳಲ್ಲಿ ಪ್ರವಾಹ ನೀಡಲಾಗಿತ್ತು. ಇಷ್ಟು ವಿಳಂಬ ಮಾಡಿ ಪರಿಹಾರ ನೀಡಬಾರದು ಎಂದರು.

ಎನ್‌ಡಿಆರ್‌ಎಫ್‌ ನಿಯಮ ಪ್ರಕಾರ ಮನೆ ಹಾನಿಗೆ 95,000 ರೂ. ನೀಡಲಾಗುತ್ತದೆ. ಬಿಜೆಪಿ ರಾಜ್ಯ ಸರ್ಕಾರದಿಂದ ನಾಲ್ಕು ಲಕ್ಷ ಸೇರಿಸಿ ಒಟ್ಟು 5 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಉತ್ತರ ಕರ್ನಾಟಕದಲ್ಲಿ ಮನೆ ಹಾನಿಗೆ ಈ ರೀತಿ ಪರಿಹಾರ ನೀಡದೆ, ಕೇಂದ್ರದ ಪಾಲನ್ನು ಮಾತ್ರ ನೀಡುತ್ತಿದೆ. ಕೇವಲ 95,000 ರೂ. ನಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದಿಂದ 6,651.15 ಕೋಟಿ ರೂ. ಬೆಳೆ ಹಾನಿ ಪರಿಹಾರವನ್ನು 51.95 ಲಕ್ಷ ರೈತರ ಬ್ಯಾಂಕ್‌ ಖಾತೆಗೆ ಹಾಕಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಡಿಬಿಟಿ ಬದಲು ಫ್ರೂಟ್‌ ತಂತ್ರಾಂಶ ತಂದು ನಾಲ್ಕು ತಿಂಗಳು ವಿಳಂಬ ಮಾಡಿದೆ. ಈಗ ಪರಿಹಾರ ನೀಡಲು ತಡವಾಗುತ್ತಿದೆ ಎಂದರು.

2014-2022 ರವರೆಗೆ ನರೇಂದ್ರ ಮೋದಿ ಸರ್ಕಾರ 11,603 ಕೋಟಿ ರೂ. ಪರಿಹಾರ ನೀಡಿದ್ದರೆ, ಮನಮೋಹನ್‌ ಸಿಂಗ್‌ ಸರ್ಕಾರ 3,233 ಕೋಟಿ ರೂ. ನೀಡಿತ್ತು. ಅಂದ್ರೆ ನಾಲ್ಕು ಪಟ್ಟು ಅಧಿಕಾರ ಪರಿಹಾರ ದೊರೆತಿದೆ. ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ನೀಡಲಿ ಎಂದು ಕೇಳಿರಲಿಲ್ಲ. ರಾಜ್ಯದ ಖಜಾನೆಯಿಂದಲೇ ಮೊದಲು ಹಣ ನೀಡಲಾಗಿತ್ತು. ಕೇಂದ್ರ ಸರ್ಕಾರಕ್ಕಾಗಿ ಕಾಯಬಾರದು ಎಂಬುದು ನನ್ನ ಅಭಿಪ್ರಾಯ. ಅದೇ ರೀತಿ ಈಗಲೂ ಕಾಂಗ್ರೆಸ್‌ ಸರ್ಕಾರ ಖಜಾನೆಯಿಂದ ಹಣ ತೆಗೆದು ನೀಡಲಿ ಎಂದು ಆಗ್ರಹಿಸಿದರು.

ಕಲಬುರ್ಗಿ, ಬೀದರ್‌, ವಿಜಯಪುರ, ಯಾದಗಿರಿ ಮೊದಲಾದ ಜಿಲ್ಲೆಗಳಲ್ಲಿ 117 ಕ್ಕೂ ಅಧಿಕ ಹಳ್ಳಿಗಳು ಜಲಾವೃತವಾಗಿದೆ. 20,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿ, 14.58 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. 2,890 ಶಾಲೆಗಳಿಗೆ ಹಾನಿಯಾಗಿದೆ. ಮೈಸೂರಿನಲ್ಲಿ ದಸರಾ ಆಚರಿಸುತ್ತಿದ್ದರೆ, ಉತ್ತರ ಕರ್ನಾಟಕದ ಜನರು ನೀರಿನಲ್ಲಿದ್ದರು. ನಾವೆಲ್ಲರೂ ಕಾರಿನಲ್ಲಿ ಹೋಗಿ ಭೇಟಿ ಮಾಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ಮಾಡಿದರು. ಅದರ ಬದಲು ಕಾರಿನಲ್ಲೇ ಬಂದು ಜನರನ್ನು ಭೇಟಿ ಮಾಡಬಹುದಿತ್ತು. ಎಲ್ಲವೂ ಸರಿ ಇದೆ ಎಂದೇ ಐಎಎಸ್‌ ಅಧಿಕಾರಿಗಳು ಹೇಳುತ್ತಾರೆ. ಮುಖ್ಯಮಂತ್ರಿ ಪ್ರತಿ ಹಳ್ಳಿಗೆ ಹೋಗಬೇಕಿತ್ತು. ಅಧಿಕಾರಿಗಳು ಕೂಡ ಸಮೀಕ್ಷೆಗಾಗಿ ಗ್ರಾಮಗಳಿಗೆ ಬಂದಿಲ್ಲ. ಅನೇಕ ಕಡೆ ಪ್ರವಾಹ ಬಂದಿಲ್ಲ ಎಂದು ತಪ್ಪು ವರದಿ ನೀಡಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಯಾವೆಲ್ಲ ಹಳ್ಳಿಗಳಲ್ಲಿ ಪ್ರವಾಹ ಆಗಿದೆ ಎಂದು ತಿಳಿಸಿದ್ದರೂ ಅವರಿಗೆ ಕಂದಾಯ ಇಲಾಖೆಯಿಂದ ಉತ್ತರ ನೀಡಿಲ್ಲ. ರೈತರನ್ನು ಕೈ ಬಿಟ್ಟು ಸರ್ಕಾರ ಅನ್ಯಾಯ ಮಾಡುತ್ತಿದೆ. ಆದ್ದರಿಂದ ಸರ್ಕಾರ ಮತ್ತೊಮ್ಮೆ ಸಮೀಕ್ಷೆ ಮಾಡಲಿ ಎಂದು ಒತ್ತಾಯಿಸಿದರು.

ತುಂಗಭದ್ರಾ ಜಲಾಶಯದ ಗೇಟ್‌ನಿಂದ ನೀರು ಹರಿದು ಆಂಧ್ರಪ್ರದೇಶಕ್ಕೆ ಹೋಗಿದೆ. 33 ಗೇಟ್‌ ಅಳವಡಿಸದೇ ಇದ್ದಿದ್ದರಿಂದ ಈ ಸಮಸ್ಯೆಯಾಗಿದೆ. ನಾನು ಭೇಟಿ ನೀಡಿದ್ದಾಗ 12 ಕೋಟಿ ರೂ. ಬಿಲ್‌ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದರು. ಪಾದಯಾತ್ರೆ, ಬಂದ್‌ ಆಗುತ್ತಲೇ ಇದ್ದರೂ ಸರ್ಕಾರ ಕ್ರಮ ವಹಿಸಲಿಲ್ಲ. ಇದರಿಂದಾಗಿ ಎರಡು ಬೆಳೆ ನಷ್ಟವಾಗಿದೆ. ಆದ್ದರಿಂದ ಪ್ರತಿ ಎಕರೆಗೆ 25,000 ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಉತ್ತರ ಕರ್ನಾಕದ ಸಮಸ್ಯೆಗಳ ಬಗ್ಗೆ ಡಾ.ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದೆ. 6 ತಿಂಗಳಲ್ಲಿ ವರದಿ ನೀಡುತ್ತೇನೆಂದು ಕಳೆದ ಬಾರಿ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಪ್ರೊ.ಗೋವಿಂದರಾವ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿ 12 ತಿಂಗಳಾದರೂ ವರದಿ ಬಂದಿಲ್ಲ. ಕೆಕೆಆರ್‌ಡಿಬಿ ಅನುದಾನದಡಿ ಜಿಲ್ಲಾ ತಾಲೂಕು ಆಸ್ಪತ್ರೆ, ಪಿಎಚ್‌ಸಿ, ಸಿಎಚ್‌ಸಿ ನಿರ್ಮಿಸಲು 900 ಕೋಟಿ ರೂ. ನೀಡಲಾಗುವುದು ಎಂದು ಹೇಳಿದ್ದರು. ಇದರ ಪ್ರಗತಿ ಎಲ್ಲಿಗೆ ಬಂದಿದೆ? ಕೈಗಾರಿಕಾ ಉತ್ತೇಜನದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ 216 ಕಾರ್ಖಾನೆಗಳು ಇನ್ನೂ ಸ್ಥಾಪನೆಯ ಹಂತದಲ್ಲೇ ಇವೆ. ವಾಣಿಜ್ಯ ಕೈಗಾರಿಕಾ ಇಲಾಖೆಯಡಿ 221 ಕಾರ್ಖಾನೆಗಳು ಕೂಡ ಇದೇ ಸ್ಥಿತಿಯಲ್ಲಿವೆ. ಹತ್ತಿ ಕಾರ್ಖಾನೆ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ, ಆಲಮಟ್ಟಿ ಜಲಾಶಯವನ್ನು 224 ಮೀಟರ್‌ಗೆ ಎತ್ತರಿಸಲು 73,603 ಎಕರೆ ಭೂ ಸ್ವಾಧೀನ ಮೊದಲಾದ ಕ್ರಮಗಳ ಬಗ್ಗೆ ಹೇಳಲಾಗಿದೆ. ಆದರೆ ಇವ್ಯಾವುದೂ ಅನುಷ್ಠಾನವಾಗಿಲ್ಲ ಎಂದರು.

Leave a Reply

Your email address will not be published. Required fields are marked *

You may have missed