ಡಿಕೆಶಿ ಚನ್ನಪಟ್ಟಣದ ಮನೆ ಮಗನಾದರೆ ಜಿಲ್ಲಾ ಉಸ್ತುವಾರಿಯ ಹೊಣೆ ಹೊತ್ತುಕೊಳ್ಳಲಿ:  ಆರ್‌.ಅಶೋಕ

ಚನ್ನಪಟ್ಟಣ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚನ್ನಪಟ್ಟಣದ ಮನೆ ಮಗ ಎನ್ನುವುದಾದರೆ ಇಲ್ಲಿನ ಜಿಲ್ಲಾ ಉಸ್ತುವಾರಿಯ ಹೊಣೆ ಹೊತ್ತುಕೊಳ್ಳಲಿ. ಚುನಾವಣೆ ಬಂದಾಗ ನಾಟಕ ಮಾಡಲು ಮಾತ್ರ ಈ ರೀತಿಯ ಭಾವನಾತ್ಮಕ ಮಾತು ಆಡುತ್ತಾರೆ ಎಂದು ಪ್ರತಿಪಕ್ಷ ಆರ್‌.ಅಶೋಕ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್‌ ಕುಮಾರಸ್ವಾಮಿ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎರಡೂ ಪಕ್ಷ ಇರುವುದರಿಂದ ಗೆಲುವು ಸಮೀಪದಲ್ಲಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಈ ಹಿಂದೆ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಬಿಜೆಪಿಯ ಸಾಂಪ್ರದಾಯಿಕ ಮತಗಳೂ ಸಿಗುವುದರಿಂದ ಗೆಲ್ಲುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ, ಮುಡಾ ಹಗರಣ, ದಲಿತರ ಹಣವನ್ನು ಬೇರೆಡೆ ವರ್ಗಾಯಿಸಿರುವುದು ಮೊದಲಾದ ಕಾರಣಗಳಿಂದ ಜನರಿಗೆ ಕಾಂಗ್ರೆಸ್‌ ಮೇಲೆ ವಿಶ್ವಾಸವಿಲ್ಲ ಎಂದರು.

ಈ 16 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚನ್ನಪಟ್ಟಣಕ್ಕಾಗಲೀ, ರಾಮನಗರಕ್ಕಾಗಲೀ ಭೇಟಿ ನೀಡಿಲ್ಲ. ಭೇಟಿ ನೀಡಲು ಕೂಡ ಸಮಯವಿಲ್ಲವೆಂದಾದರೆ ಅಭಿವೃದ್ಧಿ ಹೇಗೆ ಮಾಡುತ್ತಾರೆ? ಡಿಸಿಎಂ ಡಿ.ಕೆ.ಶಿವಕುಮಾರ್‌ ನಾನು ಮನೆ ಮಗ ಎಂದು ಜನರ ಕಿವಿ ಮೇಲೆ ಹೂ ಇಡಲು ನೋಡಿದ್ದರು. ನಂತರ ತಾಯಿ ಜಿಲ್ಲೆಯನ್ನು ಬಿಟ್ಟು ಬೆಂಗಳೂರಿನ ಉಸ್ತುವಾರಿ ಪಡೆದುಕೊಂಡರು. ರಾಮಲಿಂಗಾರೆಡ್ಡಿ ಅವರನ್ನು ಇಲ್ಲಿನ ಜಿಲ್ಲಾ ಉಸ್ತುವಾರಿ ಮಾಡಿದ್ದರೂ, ಅವರಿಗೆ ಇಲ್ಲಿಗೆ ಬರಲು ಇಷ್ಟವಿಲ್ಲ. ಚುನಾವಣೆ ಬಂದಿರುವುದರಿಂದ ನಾಟಕ ಮಾಡಲು ಇಲ್ಲಿಗೆ ಬಂದಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ಅಷ್ಟೊಂದು ಪ್ರೀತಿ ಇದ್ದರೆ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಬೇಕಿತ್ತು. ಬೆಂಗಳೂರಿನಲ್ಲಿ ಸಮೃದ್ಧಿ ಮಾಡಲು ಹೊರಟಿದ್ದಾರೆ. ಆದರೆ ಚನ್ನಪಟ್ಟಣ ಅಭಿವೃದ್ಧಿಗೆ ಹತ್ತು ಪೈಸೆ ಹಣವಿಲ್ಲ ಎಂದು ದೂರಿದರು.

ಸರ್ಕಾರದಲ್ಲಿ ಸಂಬಳ ಕೊಡಲು ಕೂಡ ದುಡ್ಡಿಲ್ಲ. ರಾಮನಗರ ಜಿಲ್ಲೆಗೆ ಇವರೇನು ಮಾಡಿದ್ದಾರೆಂದು ತಿಳಿಸಬೇಕು. ಬಿಜೆಪಿ ಸರ್ಕಾರವಿದ್ದಾಗ ಇಲ್ಲಿಗೆ ವಿಶ್ವವಿದ್ಯಾಲಯ ತರಲಾಯಿತು. ನೀರಾವರಿ ಯೋಜನೆಗಳನ್ನು ತರಲಾಯಿತು. ಸಿ.ಪಿ.ಯೋಗೇಶ್ವರ್‌ ತಾವೇ ನೀರಾವರಿ ಯೋಜನೆ ತಂದಿದ್ದೇನೆಂದು ಹೇಳಿಕೊಂಡರು ಕೂಡ, ಅನುದಾನ ಮಂಜೂರು ಮಾಡಿದ್ದು ಬಿಜೆಪಿ ಸರ್ಕಾರವೇ ಹೊರತು ಶಾಸಕರಲ್ಲ. ಅದಕ್ಕಿಂತ ಹೆಚ್ಚಾಗಿ ಇಲ್ಲಿ ಎಂಜಿನಿಯರ್‌ ಆಗಿದ್ದ ವೆಂಕಟೇಗೌಡ ನಮ್ಮ ಬಳಿ ಬಂದು ಅನುದಾನ ಮಂಜೂರು ಮಾಡಿಸಿಕೊಂಡಿದ್ದರು. ಯಾವುದೇ ಯೋಜನೆ ಬರಬೇಕೆಂದರೂ ಅದಕ್ಕೆ ಸರ್ಕಾರ ಕಾರಣ ಎಂದರು.

ಪಕ್ಷವನ್ನು ಬಿಟ್ಟು ಹೋಗುವವರು ಒಂದೇ ಡೈಲಾಗ್‌ ಹೊಡೆಯುತ್ತಾರೆ. ಬಿಜೆಪಿ ಜೊತೆ ಕಾರ್ಯಕರ್ತರ ಪಡೆ ಇದೆ. ಸಂಘಟನೆಯನ್ನು ಇನ್ನಷ್ಟು ಗಟ್ಟಿಯಾಗಿ ಬೆಳೆಸುತ್ತೇವೆ ಎಂದರು.

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ ಪಾಲ್ಗೊಂಡು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಬಂದು 16 ತಿಂಗಳಾಗಿದೆ. ಮನಸ್ಸು ಮಾಡಿದರೆ ಸಿಎಂ ಸಿದ್ದರಾಮಯ್ಯನವರಿಗೆ ಎಲ್ಲ ಜಿಲ್ಲೆಗೆ ಹೋಗಬಹುದು. ಆದರೆ ಅವರು ಚನ್ನಪಟ್ಟಣಕ್ಕೆ ಬಂದು 500 ದಿನಗಳು ಕಳೆದಿವೆ. ಈಗಾಗಲೇ ಮುಡಾ ಹಗರಣದ ತನಿಖೆ ನಡೆಯುತ್ತಿದ್ದು, ಅದರ ಫಲಿತಾಂಶ ಬಂದರೆ ಶಾಶ್ವತವಾಗಿ ಈ ಕಡೆ ಬರುವುದಿಲ್ಲ. ಡಿ.ಕೆ.ಶಿವಕುಮಾರ್ ಇಲ್ಲಿ ಅಭ್ಯರ್ಥಿಯಾಗುತ್ತೇನೆಂದು ಹೇಳಿ ಓಡಿಹೋದರು. ಮುಡಾ ಹಗರಣದ ತನಿಖೆಯ ವರದಿ ಬಂದರೆ ಸರ್ಕಾರವೇ ಬಿದ್ದು ಹೋಗಬಹುದು. ಹೀಗೆ ಮುಳುಗುವ ಪಕ್ಷಕ್ಕೆ ಮತ ಹಾಕಿದರೆ ಲಾಭವಿಲ್ಲ ಎಂದು ಜನರಿಗೆ ತಿಳಿಸಬೇಕು ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರು ಭಾವನಾತ್ಮಕ ಜೀವಿ. ಆದರೆ ಕಾಂಗ್ರೆಸ್ ನಾಯಕರು ಕಟುಕರು. ಕುಮಾರಸ್ವಾಮಿ ಕಾರಿನಲ್ಲಿ ಹೋಗುತ್ತಿರುವಾಗ ಬಡ ವ್ಯಕ್ತಿ ಕಂಡರೆ ಅವನ ಬಳಿ ಹೋಗಿ ಸಹಾಯ ಮಾಡುತ್ತಾರೆ. ಆದರೆ ಕಾಂಗ್ರೆಸ್ ನವರು ಈ ಭಾವನೆಯನ್ನೇ ತಮಾಷೆ ಮಾಡುತ್ತಾರೆ‌. ಜೊತೆಗೆ ದೇವೇಗೌಡರ ವಯಸ್ಸಿನ ಬಗ್ಗೆಯೂ ಟೀಕೆ ಮಾಡುತ್ತಾರೆ‌. ಯಾರಿಗೂ ರೋಗ ಬರುವುದಿಲ್ಲವೇ? ಔಷಧಿ ಸೇವಿಸುವುದಿಲ್ಲವೇ? ಎಂದು ಪ್ರಶ್ನಿಸಿದರು‌.

ರೈತರ ಸಾವಿರಾರು ಎಕರೆ ಭೂಮಿಯನ್ನು ವಕ್ಫ್ ಗೆ ಬರೆದುಕೊಟ್ಟಿದ್ದಾರೆ. ಜಮೀರ್ ಅಹ್ಮದ್ ಸಚಿವರಾದ ಬಳಿಕ ಲಕ್ಷಾಂತರ ಜಮೀನುಗಳನ್ನು ವಕ್ಫ್ ಗೆ ಸೇರಿಸಲು ಕ್ರಮ ವಹಿಸಲಾಗುತ್ತಿದೆ. ಆದರೆ ರೈತರು ಈ ವಿವಾದವನ್ನು ಕೋರ್ಟ್ ಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಅದು ವಕ್ಫ್ ಬೋರ್ಡ್ ನಲ್ಲೇ ತೀರ್ಮಾನವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಕಬಳಿಕೆ ತಪ್ಪಿಸಲು ಪ್ರತ್ಯೇಕ ಕಾನೂನು ತರುತ್ತಿದ್ದಾರೆ. ರೈತರು ತಮ್ಮ ಪಹಣಿಯನ್ನು ಪರಿಶೀಲಿಸಿಕೊಳ್ಳಬೇಕು. ಅದರಲ್ಲಿ ವಕ್ಫ್ ಭೂಮಿ ಎಂದಿದ್ದರೆ ಭೂಮಿ ಸಿಗುವುದಿಲ್ಲ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದಲಿತರ ಹಣವನ್ನೂ ಕಾಂಗ್ರೆಸ್ ಬಿಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ 14 ಸೈಟುಗಳನ್ನು ಲೂಟಿ ಮಾಡಿದ್ದಾರೆ. ಬಡವರಿಗೆ ನಿವೇಶನ ನೀಡುವ ಬದಲು ತಾವೇ ಎಲ್ಲವನ್ನೂ ಲೂಟಿ ಮಾಡಿದ್ದಾರೆ. ಇವರಿಗೆ ಮತ ಹಾಕಿದರೆ ಲೂಟಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಹೇಳಿದರು.

You may have missed