ಕೇಂದ್ರ ಬಜೆಟ್: ವಿಮಾ ವಲಯದಲ್ಲಿ FDI ಮಿತಿ ಶೇ 74 ರಿಂದ ಶೇ 100ಕ್ಕೆ ಹೆಚ್ಚಳ
ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ನಮ್ಮ ಬೆಳವಣಿಗೆಯ ಸಾಮರ್ಥ್ಯ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಆರು ಕ್ಷೇತ್ರಗಳಲ್ಲಿ ಪರಿವರ್ತನಾತ್ಮಕ ಸುಧಾರಣೆಗಳನ್ನು ಪ್ರಾರಂಭಿಸುವ ಗುರಿಯನ್ನು 2025-26ನೇ ಸಾಲಿನ ಬಜೆಟ್ ಹೊಂದಿದೆ ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿ ಮಾಹಿತಿ ನೀಡಿದ್ದಾರೆ.
ಈ ಕ್ಷೇತ್ರಗಳಲ್ಲಿ ಹಣಕಾಸು ವಲಯವೂ ಒಂದಾಗಿದ್ದು, ಇದು ವಿಮೆ, ಪಿಂಚಣಿಗಳು, ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳು (ಬಿಐಟಿಎಸ್) ಮತ್ತು ಮುಂತಾದ ಕ್ಷೇತ್ರಗಳನ್ನು ಒಳಗೊಂಡಿದೆ.
ವಿಮಾ ಕ್ಷೇತ್ರದಲ್ಲಿ ಎಫ್.ಡಿ.ಐ
ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ – ಎಫ್.ಡಿ.ಐ ಮಿತಿ ಶೇ 74 ರಿಂದ ಶೇ 100ಕ್ಕೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಈ ಹೆಚ್ಚಳದ ಮಿತಿಯು ಸಂಪೂರ್ಣ ಪ್ರೀಮಿಯಂ ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಲಭ್ಯವಿರುತ್ತದೆ. ವಿದೇಶಿ ಹೂಡಿಕೆಗೆ ಸಂಬಂಧಿಸಿದ ಪ್ರಸ್ತುತ ಗಾರ್ಡ್‌ರೇಲ್‌ಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಸರಳಗೊಳಿಸಲಾಗುತ್ತದೆ.
ಪಿಂಚಣಿ ವಲಯ
ಪಿಂಚಣಿ ಉತ್ಪನ್ನಗಳ ನಿಯಂತ್ರಣಕ್ಕಾಗಿ ಸಮನ್ವಯ ಮತ್ತು ಅಭಿವೃದ್ಧಿಗಾಗಿ ಒಂದು ವೇದಿಕೆಯನ್ನು ಸ್ಥಾಪಿಸಲಾಗುತ್ತದೆ.
ಕೆವೈಸಿ ಸರಳೀಕರಣ
ಕೆವೈಸಿಯನ್ನು ಸರಳೀಕರಣಗೊಳಿಸಲಾಗುವುದು ಎಂದು ಈ ಹಿಂದೆ ಹೇಳಿದಂತೆ ಇದೀಗ 2025ರಲ್ಲಿ ನವೀಕರಿಸಿದ ಕೇಂದ್ರೀಯ ಕೆವೈಸಿ ನೋಂದಣಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ನಿಯಮಿತವಾಗಿ ನವೀಕರಣಕ್ಕಾಗಿ ಸುವ್ಯವಸ್ಥಿತವಾದ ವ್ಯವಸ್ಥೆಯನ್ನು ಸಹ ಜಾರಿಗೆ ತರಲಾಗುತ್ತದೆ.
ಕಂಪೆನಿಗಳ ವಿಲೀನ
ಕಂಪನಿ ವಿಲೀನ ಪ್ರಕ್ರಿಯೆಗಳಿಗೆ ತ್ವರಿತ ಅನುಮೋದನೆ ನೀಡುವ ಕಾರ್ಯವಿಧಾನಗಳನ್ನು ತರ್ಕಬದ್ಧಗೊಳಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು. ತ್ವರಿತ ವಿಲೀನಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಮತ್ತು ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತದೆ.
ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳು
ಸುಸ್ಥಿರ ವಿದೇಶಿ ಹೂಡಿಕೆಯನ್ನು ಉತ್ತೇಜಿಸಲು ಮತ್ತು “ಭಾರತದ ಅಭಿವೃದ್ಧಿ ಮೊದಲು” ಸ್ಫೂರ್ತಿಯಡಿ ಪ್ರಸ್ತುತ ಮಾದರಿ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳನ್ನು [ಬಿಐಟಿ] ಪುನರುಜ್ಜೀವನಗೊಳಿಸಲಾಗುವುದು ಮತ್ತು ಹೆಚ್ಚು ಹೂಡಿಕೆ ಸ್ನೇಹಿಯನ್ನಾಗಿ ರೂಪಿಸಲಾಗುತ್ತದೆ.