ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಸಂಪೂರ್ಣ ಕಡೆಗಣನೆ: BJP ಆಕ್ರೋಶ
ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಕಡೆಗಣಿಸಿದೆ. ತಮಿಳುನಾಡಿಗೆ ನೀರು ಬಿಟ್ಟ ಬಳಿಕ ಇದೀಗ ತರಾತುರಿಯಲ್ಲಿ ಸರ್ವಪಕ್ಷ ಸಭೆ ಕರೆದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಆಕ್ಷೇಪಿಸಿದ್ದಾರೆ.
“ಊರು ಕೊಳ್ಳೆ ಹೋದ ಮೇಲೆ ಡಿಡ್ಡಿ ಬಾಗಿಲು ಹಾಕಿದಂತೆ” ಎಂಬಂತೆ ರಾಜ್ಯ ಸರ್ಕಾರದ ವರ್ತನೆ ಇದೆ ಎಂದು ಅವರು ಟೀಕಿಸಿದ್ದಾರೆ. ಇಂದಿನ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಮುಖಂಡರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ಮತ್ತಿತರ ಪ್ರಮುಖರು ಭಾಗವಹಿಸಿ ಪಕ್ಷದ ನಿಲುವನ್ನು ಸಮರ್ಥವಾಗಿ ಮಂಡಿಸಿದ್ದಾರೆ ಎಂದು ಅವರು ವಿವರ ನೀಡಿದ್ದಾರೆ.
ಸರ್ವಪಕ್ಷ ಸಭೆಗೆ ವಿಳಂಬ -BSY ಆಕ್ಷೇಪ:
ಬಿ.ಎಸ್. ಯಡಿಯೂರಪ್ಪ ಮಾತನಾಡಿ, ತಮಿಳುನಾಡಿಗೆ ನೀರನ್ನು ಬಿಟ್ಟು ಇದೀಗ ಸರ್ವ ಪಕ್ಷ ಸಭೆ ಕರೆದಿರುವುದು ಸರಿಯಲ್ಲ. 26ನೇ ತಾರೀಕು ಸುಪ್ರೀಂ ಕೋರ್ಟ್‍ನಲ್ಲಿ ಸಮರ್ಥವಾಗಿ ರಾಜ್ಯದ ಪರವಾಗಿ ವಾದ ಮಂಡನೆ ಮಾಡಬೇಕು. ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲವೆಂದು ಮನದಟ್ಟು ಮಾಡಿಕೊಡಬೇಕು ಎಂದು ಆಗ್ರಹಿಸಿದರು.